Article by R. Indira- Prajavani April 1, 2013

ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸುವಂಥ ಮಹತ್ವಾಕಾಂಕ್ಷಿ ಯೋಜನೆಗಳೆಂದು ಗುರುತಿಸಲಾಗುತ್ತಿರುವ ಕೆಲ ಪ್ರಸ್ತಾವನೆಗಳನ್ನು ದೇಶದಲ್ಲಿ ಉನ್ನತ ಶಿಕ್ಷಣದ ಚುಕ್ಕಾಣಿಯನ್ನು ಹಿಡಿದಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ವಿಶ್ವವಿದ್ಯಾನಿಲಯ ಅನುದಾನ ಆಯೋಗಗಳು ಇತ್ತೀಚೆಗಷ್ಟೇ ನಮ್ಮ ಮುಂದಿಟ್ಟಿವೆ.

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪತೆಯನ್ನು ತರುವ ಹಾಗೂ ಅದರ ಗುಣಮಟ್ಟವನ್ನು ಹೆಚ್ಚಿಸುವುದರತ್ತ ಗಮನ ಹರಿಸುವ ಕೆಲವು `ಬೃಹತ್ ಬದಲಾವಣೆ'ಗಳನ್ನು ತರಲು ಈ ಎರಡು ಸಂಸ್ಥೆಗಳೂ ಆಲೋಚಿಸುತ್ತಿದ್ದು, 12ನೇ ಪಂಚವಾರ್ಷಿಕ ಯೋಜನಾ ಅವಧಿ ಪೂರ್ಣಗೊಳ್ಳುವ ವೇಳೆಗೆ ಉನ್ನತ ಶಿಕ್ಷಣದ ದಿಕ್ಕನ್ನೇ ಬದಲಿಸುವ ಇಂಗಿತವನ್ನು ಅವು ವ್ಯಕ್ತಪಡಿಸುತ್ತಿವೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ಏಕರೂಪವಾದ ವ್ಯವಸ್ಥೆಯಡಿಯಲ್ಲಿ ತರುವ ಯೋಜನೆಯೊಂದನ್ನು ರೂಪಿಸಲು ಸನ್ನದ್ಧವಾಗಿದೆ. ಈಗ ನಾವು ಕಾಣುತ್ತಿರುವ ಬಗೆಬಗೆಯ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಇರುವ ತಾರತಮ್ಯವನ್ನು ತೊಡೆದು, ಯಾರು ಎಲ್ಲೇ ವ್ಯಾಸಂಗ ಮಾಡಲಿ, ಅವರು ಪಡೆದ ಶಿಕ್ಷಣಕ್ಕೆ ಒಂದೇ ತೆರನಾದ ಗುರುತಿಸುವಿಕೆಯನ್ನು ನೀಡಬೇಕೆಂಬುದು ಈ ಯೋಜನೆಯ ಪ್ರಧಾನ ಉದ್ದೇಶ.

ಈ ವ್ಯವಸ್ಥೆಯನ್ನು ರೂಪಿಸಲು ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟು (ನ್ಯಾಷನಲ್ ಹೈಯ್ಯರ್ ಎಜಕೇಷನ್ ಕ್ವಾಲಿಫಿಕೇಷನ್ ಫ್ರೇಂವರ್ಕ್) ಒಂದನ್ನು ತಯಾರಿಸಬೇಕೆಂಬ  ಪ್ರಸ್ತಾವನೆಯನ್ನು ಸದ್ಯದಲ್ಲೇ ಸೇರಲಿರುವ ಕೇಂದ್ರೀಯ ಶಿಕ್ಷಣ ಸಲಹಾ ಮಂಡಲಿಯ ಸಭೆಯ ಮುಂದಿಡಲು ಮಾನವ ಸಂಪನ್ಮೂಲ ಸಚಿವಾಲಯ ಸಿದ್ಧವಾಗಿದೆ.

ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟಿನ ಉದ್ದೇಶಗಳೇನು ಮತ್ತು ಅದನ್ನು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸುವುದರಿಂದ ಈಗಿರುವ ಪರಿಸ್ಥಿತಿಗಿಂತ ಭಿನ್ನವಾದ ಪರಿಸ್ಥಿತಿ ಹೇಗೆ ಸೃಷ್ಟಿಯಾಗುವುದು ಎಂಬ ಪ್ರಶ್ನೆಗಳು ಈ ಹಂತದಲ್ಲಿ ಸಹಜವಾಗಿಯೇ ಏಳುತ್ತವೆ.

ಭಾರತದ ವಿವಿಧ ಬಗೆಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಗ ವಿಭಿನ್ನ ರೀತಿಯ ಪ್ರವೇಶ ನಿಯಮಗಳು ಜಾರಿಯಲ್ಲಿವೆ. ಅದಲ್ಲದೆ ವಿವಿಧ ಕೋರ್ಸುಗಳ ಅವಧಿ, ಬೋಧನಾ ಮತ್ತು ಕಲಿಕಾ ವಿಧಾನಗಳಲ್ಲಿಯೂ ವ್ಯತ್ಯಾಸಗಳನ್ನು ನಾವು ಕಾಣುತ್ತೇವೆ. ಎಲ್ಲಕ್ಕಿಂತ ಮಿಗಿಲಾಗಿ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರಿಗೂ ಏಕ ರೀತಿಯ ಸಾಮರ್ಥ್ಯಗಳಾಗಲಿ, ಕಲಿಕಾ ಶಕ್ತಿಗಳನ್ನಾಗಲಿ ಪಡೆಯಲು ಸಾಧ್ಯವಾಗದಂಥ ಪರಿಸ್ಥಿತಿ ಇರುವುದರಿಂದ, ಉನ್ನತ ಶಿಕ್ಷಣವನ್ನು ಪಡೆದಂಥ ಎಲ್ಲ ವಿದ್ಯಾರ್ಥಿಗಳಿಗೂ ಜಾಗತಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಸಮಾನ ಮಾನ್ಯತೆ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟು ರೂಪುಗೊಳ್ಳಲಿದೆ ಎಂಬುದು ಮಾನವ ಸಂಪನ್ಮೂಲ ಸಚಿವಾಲಯದ ಆಶಯ.

ದೇಶದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಪದವಿಗಳನ್ನು ನೀಡುವ ಇತರ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಪಠ್ಯಕ್ರಮ ಮತ್ತು ಬೋಧನಾ ಕ್ರಮಗಳನ್ನು ರೂಪಿಸಿಕೊಳ್ಳಲು ಒಂದು ಮಾದರಿಯನ್ನು ಈ ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟು ಒದಗಿಸಲಿದೆ ಎಂಬ ಸೂಚನೆಯನ್ನು ಮಾನವ ಸಂಪನ್ಮೂಲ ಸಚಿವಾಲಯ ನೀಡಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ಗುರುತಿಸಿರುವ ಈ ಹೊಸ ಯೋಜನೆ, ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ವಿದ್ಯಾರ್ಥಿಗಳ ಮುಕ್ತ ಸಂಚಲನೆಯನ್ನು ಉತ್ತೇಜಿಸುವಂಥ ಪರಿಸರ ನಿರ್ಮಾಣವಾಗಬೇಕು ಎಂಬ ತತ್ವವನ್ನು ಪ್ರತಿಪಾದಿಸುತ್ತದೆ.

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ರೀತಿಯ ಏಕರೂಪತೆಯನ್ನು ತಂದು ಸಂಸ್ಥೆಗಳ ನಡುವೆ ಸುಲಭ ಸಂಚಲನೆಯ ಅವಕಾಶಕ್ಕೆ ಆಸ್ಪದವನ್ನು ನೀಡಬೇಕೆಂಬ ಆಶಯವೇನೋ ಸರಿ. ಆದರೆ ಭಾರತದಲ್ಲಿರುವ ಸುಮಾರು 600 ವಿಶ್ವವಿದ್ಯಾಲಯಗಳು ಹಾಗೂ 37,000 ಕಾಲೇಜುಗಳಲ್ಲಿ ಏಕರೂಪತೆಯನ್ನು ತರುವ ಪ್ರಯತ್ನ ಮಾತ್ರ ಸುಲಭ ಸಾಧ್ಯವಲ್ಲ. ಕೆಂದ್ರೀಯ ವಿಶ್ವವಿದ್ಯಾಲಯಗಳು, ರಾಜ್ಯ ಮಟ್ಟದ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು, ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಸಂಸ್ಥೆಗಳು, ಸರ್ಕಾರಿ ಕಾಲೇಜುಗಳು, ಖಾಸಗಿ-ಅನುದಾನಿತ ಕಾಲೇಜುಗಳು, ಖಾಸಗಿ ಕಾಲೇಜುಗಳು - ಹೀಗೆ ಉನ್ನತ ಶಿಕ್ಷಣ ಸಂಸ್ಥೆಗಳ ಬಗೆಗಳನ್ನು ನೋಡುತ್ತಾ ಹೋದ ಹಾಗೆಲ್ಲ ಇವುಗಳ ನಡುವೆ ಇರುವ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವ್ಯತ್ಯಾಸಗಳೂ ಸ್ಪಷ್ಟವಾಗುತ್ತಾ ಹೋಗುತ್ತವೆ.

ಪ್ರವೇಶ ನಿಯಮಗಳಿಂದ ಹಿಡಿದು, ಪಠ್ಯಕ್ರಮ, ಬೋಧನಾ ವಿಧಾನಗಳು, ಪರೀಕ್ಷಾ ನಿಯಮಗಳು ಹಾಗೂ ಫಲಿತಾಂಶಗಳನ್ನು ನಿರ್ಧರಿಸುವ ಮಾನದಂಡಗಳು, ಅವುಗಳಿಗಿರುವ ಗೋಚರತೆ - ಗೌರವ -ಗುರುತಿಸುವಿಕೆಗಳು ಮತ್ತು ಲಭ್ಯವಿರುವ ಸಂಪನ್ಮೂಲಗಳಲ್ಲಿ ದೇಶದ ವಿವಿಧ ಬಗೆಯ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಗುರುತರವಾದ ವ್ಯತ್ಯಾಸಗಳಿವೆ.

ಸ್ವತಃ ಮಾನವ ಸಂಪನ್ಮೂಲ ಮಂತ್ರಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗಗಳೇ ಉನ್ನತ ಶಿಕ್ಷಣ ಸಂಸ್ಥೆಗಳಿಗೆ  ಅತ್ಯುತ್ಕೃಷ್ಟ ,  ಉತ್ಕೃಷ್ಟ  ಮುಂತಾದ ಸ್ಥಾನಗಳನ್ನು ನೀಡಿ ಅವುಗಳ ಗುಣಮಟ್ಟವನ್ನು ನಿರ್ಧರಿಸುತ್ತಿವೆ. ಇದಲ್ಲದೆ ದೇಶದ ಅನೇಕ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು `ನ್ಯಾಕ್' ಸಂಸ್ಥೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿಭಾಗಿಗಳಾಗಿ, ` ಎ'ಯಿಂದ ಹಿಡಿದು  `ಸಿ'  ವರೆಗೆ ಶ್ರೇಯಾಂಕಗಳನ್ನು ಪಡೆದಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟದ ಪರಿಶೀಲನೆ ಈಗಂತೂ ನಿರಂತರವಾಗಿ ನಡೆಯುತ್ತಿದ್ದು ಶಿಕ್ಷಣ ಸಂಸ್ಥೆಗಳಲ್ಲಿಯೂ ಶ್ರೇಣೀಕೃತವಾದ ವ್ಯವಸ್ಥೆ ನಿರ್ಮಾಣವಾಗಿದೆ.

ಗುಣಮಟ್ಟದ ಬಗ್ಗೆ ಕಾಳಜಿಗಳು ಹೆಚ್ಚಾಗುತ್ತಿರುವುದರ ಜೊತೆ ಜೊತೆಗೆ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ ಹತ್ತು ವರ್ಷಗಳಲ್ಲಂತೂ ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೃಹತ್ ಪ್ರಮಾಣದ ಹೆಚ್ಚಳವಾಗಿದೆ. ಒಂದು ವರದಿಯ ಪ್ರಕಾರ 2000ದಿಂದ 2010ರ ಅವಧಿಯಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಗೆ 20,000 ಕಾಲೇಜುಗಳು ಮತ್ತು 80 ಲಕ್ಷ ವಿದ್ಯಾರ್ಥಿಗಳ ಸೇರ್ಪಡೆಯಾಗಿದೆ. ಇದು ಕೇವಲ ಸಂಖ್ಯಾತ್ಮಕ ಹೆಚ್ಚಳವೇ ಅಥವಾ ಅವುಗಳು ನೀಡುತ್ತಿರುವ ಶಿಕ್ಷಣದ ಗುಣಮಟ್ಟದಲ್ಲಿ ಅಥವಾ ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿ ಪಡೆದ ಶಿಕ್ಷಣದಿಂದ ಪಡೆಯುತ್ತಿರುವ ಪ್ರಯೋಜನದಲ್ಲಿ ಏಕರೂಪಯಿದೆಯೇ ಎನ್ನುವ ಪ್ರಶ್ನೆಯನ್ನು ಎತ್ತಿದಾಗ, ನಮಗೆ ಸಿಗುವ ಉತ್ತರ ಆಶಾದಾಯಕವಾಗೇನಿಲ್ಲ.

ಭಾರತದ ಜನಸಂಖ್ಯೆಯಲ್ಲಿ ಶೇಕಡ 40ರಷ್ಟು ಯುವಜನರು. ಅವರಲ್ಲಿ ಸುಮಾರು ಮುಕ್ಕಾಲು ಭಾಗ ಅಕ್ಷರಸ್ಥರಾಗಿದ್ದು, ಯುವಜನತೆಯ ಆಕಾಂಕ್ಷೆಗಳಿಗೆ ಸ್ಪಂದಿಸುವಂಥ ಉನ್ನತ ಶಿಕ್ಷಣಾವಕಾಶಗಳು ಹೆಚ್ಚಾಗಬೇಕೆಂಬುದರಲ್ಲಿ ಸಂದೇಹವಿಲ್ಲ. ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಶೇಕಡ 11ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ವಾರ್ಷಿಕ ಹೆಚ್ಚಳ ಶೇಕಡ 7ರಷ್ಟಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರೇ ಹೇಳಿರುವ ಹಾಗೆ ಮುಂಬರುವ ನಾಲ್ಕು ವರ್ಷಗಳಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ 900ಕ್ಕೆ ಏರಲಿದ್ದು, ವಿದ್ಯಾರ್ಥಿ ದಾಖಲಾತಿ 3ಕೋಟಿಗೂ ಹೆಚ್ಚಾಗಲಿದೆ. ಹಿಂದಿನ ಮಾನವ ಸಂಪನ್ಮೂಲ ಮಂತ್ರಿಗಳು ಭಾರತಕ್ಕೆ 1500 ವಿಶ್ವವಿದ್ಯಾಲಯಗಳ ಅವಶ್ಯಕತೆ ಇದೆ ಎಂದಿದ್ದನ್ನೂ ಇಲ್ಲಿ ಸ್ಮರಿಸಬಹುದು. ಭಾರತದಲ್ಲಿ ಉನ್ನತ ಶಿಕ್ಷಣದ ಸಾಧನೆಯೆಂದರೆ ಕೇವಲ ಸಂಖ್ಯಾತ್ಮಕ ಬೆಳವಣಿಗೆಯೇ ಎಂದು ಶಿಕ್ಷಣ ತಜ್ಞರು ಸುಮಾರು ನಾಲ್ಕು ದಶಕಗಳ ಹಿಂದೆಯೇ ಎತ್ತಿದ್ದ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಲು ಪ್ರಾಯಶಃ ಅತ್ಯಂತ ಪ್ರಶಸ್ತ ಕಾಲ ಇದಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಂಭವಿಸಿರುವ ಬೆಳವಣಿಗೆ ಮತ್ತು ಹನ್ನೆರಡನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ಉಂಟಾಗಲಿರುವ ಬದಲಾವಣೆಗಳನ್ನು ಕುರಿತ ಭವಿಷ್ಯದ ಅಶೋತ್ತರಗಳೆರಡನ್ನೂ ಸಂಖ್ಯೆಗಳ ದೃಷ್ಟಿಯಿದ ಬೃಹತ್ ಸಾಧನೆ ಎಂದು ಬಿಂಬಿಸಬಹುದು. ಆದರೆ ಈ ಬೆಳವಣಿಗೆಯ ಸ್ವರೂಪ ಮತ್ತು ಅದು ಚಲಿಸುತ್ತಿರುವ ದಿಕ್ಕನ್ನು ವಿಶ್ಲೇಷಿಸಿದಾಗ ಅದು ಬಹು ಓರೆಯಾಗಿರುವುದು ಕಂಡು ಬರುತ್ತದೆ.

ಆರ್ಥಿಕ ಉದಾರೀಕರಣದ ಯುಗ ಆರಂಭವಾದ ಮೇಲೆ ಬಹು ದೊಡ್ಡ ಪ್ರಮಾಣದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದ್ದು ಖಾಸಗಿ ವಲಯ. ಒಂದು ಅಂದಾಜಿನ ಪ್ರಕಾರ ಖಾಸಗಿ ಕಾಲೇಜುಗಳ ಸಂಖ್ಯೆಯಲ್ಲಿ ಶೇಕಡ 150ರಷ್ಟು ಪ್ರಮಾಣದಲ್ಲಿ ಬೆಳವಣಿಗೆಯಾಗಿದ್ದು, ಈಗಾಗಲೇ ದೇಶದಲ್ಲಿ 100ಕ್ಕೂ ಹೆಚ್ಚು ಖಾಸಗಿ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿವೆ. ಇಂಥ ಖಾಸಗಿ ಸಂಸ್ಥೆಗಳನೇಕವು ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವ ಆಮಿಷಗಳನ್ನೊಡ್ಡಿ ವಿದ್ಯಾರ್ಥಿಗಳಿಂದ ಶುಲ್ಕದ ರೂಪದಲ್ಲಿ ಅಪಾರ ಪ್ರಮಾಣದ ಹಣ ಸಂಗ್ರಹಣೆಯಲ್ಲಿ ತೊಡಗಿವೆ.

ಹಾಗೆಂದ ಮಾತ್ರಕ್ಕೆ ಖಾಸಗಿ ವಲಯದ ಎಲ್ಲ ಸಂಸ್ಥೆಗಳೂ ಅತ್ಯುತ್ಕೃಷ್ಟ ಮಟ್ಟದ ಶಿಕ್ಷಣವನ್ನು ನೀಡುತ್ತಿವೆ ಎಂದು ಅರ್ಥೈಸಬಾರದು. ಆಗಾಗ್ಗೆ ಈ ಸಂಸ್ಥೆಗಳಿಂದ ಶೈಕ್ಷಣಿಕ ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ನಿಯಮೋಲ್ಲಂಘನೆಗಳ ಬಗ್ಗೆ ವರದಿಗಳು ಬರುತ್ತಲೇ ಇರುತ್ತವೆ. ಆದಾಗ್ಯೂ ಉಳ್ಳವರು ಈ ವ್ಯವಸ್ಥೆಯತ್ತ ಆಕರ್ಷಿತರಾಗುತ್ತಿರುವುದಕ್ಕೆ ಸರ್ಕಾರಿ ಸ್ವಾಮ್ಯದಲ್ಲಿರುವ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಿರುವುದೇ ಕಾರಣ.

ಸರ್ಕಾರಿ ವಲಯದಲ್ಲಿ ಹೊಸದಾಗಿ ಆರಂಭವಾದ ಕಾಲೇಜುಗಳ ಮಾತಿರಲಿ, ಅನೇಕ ವಿಶ್ವವಿದ್ಯಾಲಯಗಳು ಕೂಡ ಮೂಲಸೌಕರ್ಯಗಳ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಒಂದೆಡೆ ನುರಿತ ಅಧ್ಯಾಪಕರ ಕೊರತೆ, ಮತ್ತೊಂದೆಡೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಅಗತ್ಯವಾದ ಉಪಕರಣಗಳು, ಗ್ರಂಥಾಲಯ ಹಾಗೂ ವಿದ್ಯಾರ್ಥಿಗಳಲ್ಲಿ ಜೀವನ ನಿರ್ವಹಣಾ ಕೌಶಲಗಳನ್ನು ಬೆಳೆಸಲು ಅವಶ್ಯವಾದ ಪರಿಕರಗಳು ಮತ್ತು ಪರಿಣತ ಸಿಬ್ಬಂದಿಯ ಅಭಾವ - ಇಂಥ ಪರಿಸ್ಥಿತಿಯಲ್ಲಿ ತೀರಾ ಯಾಂತ್ರಿಕವಾದ ರೀತಿಯಲ್ಲಿ ಅನೇಕ ಸರ್ಕಾರಿ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟವಟಿಕೆಗಳು ನಡೆಯುತ್ತಿವೆ.

ಉನ್ನತ ಶಿಕ್ಷಣದಲ್ಲಿ ಏಕರೂಪತೆಗಾಗಿ ಸೆಮಿಸ್ಟರ್ ಪದ್ಧತಿ ಮತ್ತು ಚಾಯ್ಸ ಬೇಸ್ಡ್ ಕ್ರೆಡಿಟ್ ಸಿಸ್ಟಮ್‌ಗಳ (ಸಿ.ಬಿ.ಸಿ.ಎಸ್) ಅಳವಡಿಕೆ ಅಗತ್ಯ, ಹಾಲಿ ಅನೇಕ ಸಂಸ್ಥೆಗಳು ಇವುಗಳನ್ನು ಅಳವಡಿಸಿಲ್ಲ, ಆದ್ದರಿಂದ ಅದರ ಅಳವಡಿಕೆಯನ್ನು ಕಡ್ಡಾಯ ಮಾಡುವುದು ಕೂಡ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಬಹು ಮುಖ್ಯ ಎಂಬ ವಾದವನ್ನೂ ಮಂಡಿಸಲಾಗುತ್ತಿದೆ. ಆದರೆ ಈಗಾಗಲೇ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಅಳವಡಿಸಿಕೊಂಡಿರುವ ಸಂಸ್ಥೆಗಳ ಅನುಭವಗಳನ್ನು ಕುರಿತ ಸಮಗ್ರ ಅಧ್ಯಯನವೊಂದನ್ನು ಮೊದಲು ಕೈಗೊಳ್ಳಬೇಕಾಗಿದೆ.

ವಾರ್ಷಿಕ ಪದ್ಧತಿಯಲ್ಲಿದ್ದ ಪಠ್ಯಕ್ರಮವನ್ನು ಇಬ್ಭಾಗ ಮಾಡಿ ಸೆಮಿಸ್ಟರ್‌ಗೆ (ಚಾತುರ್ಮಾಸ) ಪರಿವರ್ತಿಸಿದಂಥ ಹಾಗೂ ಕೇವಲ ತರಗತಿಗಳನ್ನು ನಡೆಸುವುದು, ಆಂತರಿಕ ಮೌಲ್ಯಮಾಪನ ಮತ್ತು ಪರೀಕ್ಷೆಗಳನ್ನು ನಡೆಸುವುದಕ್ಕಷ್ಟೇ ಸೀಮಿತವಾಗಿರುವ ಸಿ.ಬಿ.ಸಿ.ಎಸ್ ಎಂಬ ನವೀನ ಪ್ರಯೋಗವನ್ನು ಪುನರ್-ವಿಮರ್ಶೆಗೆ ಒಳಪಡಿಸುವ ಅಗತ್ಯವಿದೆ.

ಉನ್ನತ ಶಿಕ್ಷಣದಲ್ಲಿ ಏಕರೂಪವಾದ ಪಠ್ಯಕ್ರಮ, ಮೌಲ್ಯಮಾಪನ ಹಾಗೂ ಬೋಧನಾ ಕಲಿಕಾ ವಿಧಾನಗಳನ್ನು ಅಳವಡಿಸುವುದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಈಗಾಗಲೇ ಎತ್ತಲಾಗಿದೆ. ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಗಳಿಗೆ ಏಕರೂಪದ ವ್ಯವಸ್ಥೆ ಅಡ್ಡಿಯನ್ನು ತರುವುದಿಲ್ಲವೇ? ರಾಷ್ಟ್ರೀಯ ಉನ್ನತ ಶಿಕ್ಷಣ ಅರ್ಹತಾ ಚೌಕಟ್ಟು ಒಂದು ಮಾದರಿಯಷ್ಟೇ, ಅದನ್ನು ಆಧರಿಸಿ ಸಂಸ್ಥೆಗಳು ತಮ್ಮ ಸ್ವಾಯತ್ತತೆಗೆ ಅಡ್ಡಿ ಬರದಂತೆ ಶೈಕ್ಷಣಿಕ ಕಾರ್ಯಗಳನ್ನು ನಡೆಸಬಹುದು ಎಂಬ ಆಯ್ಕೆಯನ್ನಿತ್ತರೆ ಎಷ್ಟು ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳು ರಚನಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತವೆ?

ವಿಭಿನ್ನವಾದ ಸಾಮಾಜಿ, ಆರ್ಥಿಕ ಹಿನ್ನೆಲೆಯಿರುವ ವಿದ್ಯಾರ್ಥಿಗಳಿಗೆ ಅವರವರ ಬದುಕಿನ ಪರಿಸ್ಥಿತಿಗಳು, ಅಗತ್ಯಗಳು ಮತ್ತು ಸವಾಲುಗಳಿಗೆ ಸ್ಪಂದಿಸುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕೋ ಅಥವಾ ಯಾರ ಪರಿಸ್ಥಿತಿ ಹೇಗೆ ಇರಲಿ ಏಕರೂಪವಾದ ಬೋಧನಾ - ಕಲಿಕಾ ವಿಧಾನಗಳನ್ನು ಅಳವಡಿಸಬೇಕೋ? ಆಂಗ್ಲ ಮಾಧ್ಯಮ ಮತ್ತು ಮಾತೃಭಾಷಾ ಮಾಧ್ಯಮಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿರುವವರ ಕಲಿಕಾ ಮತ್ತು ಗ್ರಹಿಕಾ ಶಕ್ತಿಯನ್ನು ವೃದ್ಧಿಸುವಂಥ ಆಕರ ಗ್ರಂಥಗಳು ಮತ್ತು ಕಂಪ್ಯೂಟರ್ ಆಧರಿತ ಜ್ಞಾನ ಎಲ್ಲ ಭಾಷೆಗಳಲ್ಲೂ ಎಲ್ಲ ಅಧ್ಯಯನ ವಿಷಯಗಳಲ್ಲೂ ಲಭ್ಯವಿದೆಯೇ?

ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಹುತೇಕ  ಖಾಯಂ ಬೋಧಕ ಹುದ್ದೆಗಳು ಖಾಲಿಯಾಗಿದ್ದು, ಬಹುಪಾಲು ಬೋಧನೆಯನ್ನು ಅತಿಥಿ ಉಪನ್ಯಾಸಕರೇ ನಿರ್ವಹಿಸುತ್ತಿರುವಂಥ ಸ್ಥಿತಿಯಲ್ಲಿ ಈ ಅಧ್ಯಾಪಕರು ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾಗುವ ತಯಾರಿ ಮಾಡಿಕೊಂಡು ತಮ್ಮ ಹುದ್ದೆಗಳನ್ನು ಖಾಯಂಗೊಳಿಸಿಕೊಳ್ಳುವ ಬಗ್ಗೆ ಚಿಂತಿಸಬೇಕೋ, ಜಾಗತಿಕ ಮಟ್ಟದಲ್ಲಿ ತಮ್ಮ ವಿದ್ಯಾರ್ಥಿಗಳ ಸಾಮರ್ಥ್ಯ ಬಲವರ್ಧನೆಯತ್ತ ಗಮನ ಹರಿಸಬೇಕೋ?-ಹೀಗೆ ಪ್ರಶ್ನೆಗಳು ಪುಂಖಾನುಪುಂಖವಾಗಿ ಹೊರ ಹೊಮ್ಮುತ್ತವೆ.

ಇವುಗಳಿಂದ ವಿಮುಖವಾಗದೆ, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕುವಂಥ ಕೆಲಸ ಮೊದಲಾಗಬೇಕು. ಉನ್ನತ ಶಿಕ್ಷಣ ವ್ಯವಸ್ಥೆಯ ಒಳಗಿರುವ ಎಲ್ಲ ವ್ಯಕ್ತಿಗಳ/ಉಪ-ವ್ಯವಸ್ಥೆಗಳ ಸಾಧನೆಗಳನ್ನು ಪರಾಮರ್ಶಿಸುವ, ಅವರ ಸಮಸ್ಯೆಗಳನ್ನು ಅರಿತು ಸೂಕ್ತ ಪರಿಹಾರಗಳನ್ನು ಅಳವಡಿಸುವಂಥ ಶೈಕ್ಷಣಿಕ ಮಾನದಂಡಗಳನ್ನು ಗುರುತಿಸುವು, ಅಳವಡಿಸುವುದು ದೇಶದಲ್ಲಿ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊತ್ತಿರುವ ಸಂಸ್ಥೆಗಳ ಆದ್ಯತೆಯಾಗಬೇಕು.

ಉನ್ನತ ಶಿಕ್ಷಣದ ಒಳಗೇ ಇರುವ ವೈರುಧ್ಯಗಳನ್ನು, ವಿರೋಧಾಭಾಸಗಳನ್ನು ಸರಿಪಡಿಸದೆ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸುವ ಪ್ರಯತ್ನದಿಂದ ಹೆಚ್ಚಿನದೇನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಇದುವರೆಗಿನ ಅನುಭವಗಳ ಆಧಾರದ ಮೇಲೆ ಸ್ಪಷ್ಟವಾಗಿಯೇ ಹೇಳಬಹುದು.

 

 

 

 

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.