ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಬೆಂಗಳೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಸಾಧಕ-ಬಾಧಕಗಳ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಪ್ರಸ್ತುತ ಉನ್ನತ ಶಿಕ್ಷಣದಲ್ಲಿನ ಖಾಸಗಿ ಸಹಭಾಗಿತ್ವದ ಬಗ್ಗೆ ಮತ್ತು ಹೊಸಸರ್ಕಾರ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಸೂಕ್ಷ್ಮ ಒಳನೋಟಗಳನ್ನು ನೀಡುತ್ತದೆ. ಜಗತ್ತಿನ ಅತಿಹೆಚ್ಚು ಯುವಜನರನ್ನು ಹೊಂದಿ ಮುಂದಿನ ದಶಕಗಳಲ್ಲಿ ಪ್ರಭಾವಿ ರಾಷ್ಟ್ರವಾಗಿ ಹೊಮ್ಮುವ ಕನಸನ್ನು ಕಾಣುತ್ತಿರುವ ನಾವು ಬದುಕಿನ ಆಧಾರ ಸ್ತಂಭವಾಗಬೇಕಾದ ಉನ್ನತಶಿಕ್ಷಣದ ಗುಣಮಟ್ಟದ ಬಗ್ಗೆ ಗಂಭೀರ ನಿಲುವು, ನಿರ್ಧಾರ ತಳೆಯಬೇಕಾಗಿದೆ.
ಉತ್ತಮ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಬೇಕೆನ್ನುವ ಆಶಯ ಎಷ್ಟು ಒಳ್ಳೆಯದೋ ಹಾಗೆಯೇ ಅಂಥ ಶಿಕ್ಷಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಲಭ್ಯವಾಗಬೇಕೆನ್ನುವ ಕಾಳಜಿ ಕೂಡ ಅಷ್ಟೇ ಮುಖ್ಯ. ಜೊತೆಗೆ ಅದನ್ನು ನಿರ್ವಹಿಸುವಲ್ಲಿ ವಹಿಸಬೇಕಾದ ಎಚ್ಚರ ಕೂಡ ಅತ್ಯಂತ ಸ್ಪಷ್ಟವಾಗಿರಬೇಕಾಗಿದೆ.
ಜಗತ್ತಿನ ಇನ್ನೂರು ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಯಾವೊಂದು ವಿಶ್ವವಿದ್ಯಾಲಯದ ಹೆಸರು ಕೂಡ ಇರದ ಇಂದಿನ ಸ್ಥಿತಿಯೇ ಮುಂದುವರೆದರೆ ಇಲ್ಲಿ ಕಲಿಯುವ ಕೋಟ್ಯಂತರ ಯುವಕರಿಗೆ ಒಳ್ಳೆಯ ಉದ್ಯೋಗ, ವೃತ್ತಿ ಹೊಂದುವ ಜಾಗತಿಕ ಅವಕಾಶವೇ ಇಲ್ಲವಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರ ಮತ್ತು ಸಾಮಾಜಿಕ ಬದ್ಧತೆಯ ತಜ್ಞರುಗಳದೇ ಹೊರತು, ನಿಗದಿತ ವಿಷಯಗಳನ್ನು ಅಸಮರ್ಪಕ ಮೂಲಸೌಲಭ್ಯಗಳ ವಾತಾವರಣದಲ್ಲಿ ಕಲಿಯುವ ಯುವಕರದ್ದಲ್ಲ.
ನಮ್ಮ ಯುವಕರ ಸಬಲೀಕರಣ ಎಂದರೆ ಸರ್ಕಾರದ ಕಾಳಜಿಯೇ ಆಗಿದೆ. ಈಗಿನ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾದ ಪ್ರತಿನೂರು ಮಕ್ಕಳಲ್ಲಿ ಉನ್ನತಶಿಕ್ಷಣಕ್ಕೆ ಕಾಲಿಡುವ ಯುವಕರ ಸಂಖ್ಯೆ ಹದಿಮೂರನ್ನು ಮೀರಿಲ್ಲ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಈ ದರ ಶೇ 60ರಷ್ಟಿದೆ. ಹೀಗಿರುವಾಗ ಉನ್ನತ ಶಿಕ್ಷಣದ ಅವಕಾಶದ ಹರವನ್ನು ವಿಸ್ತರಿಸುವುದೆಷ್ಟು ಮುಖ್ಯವೋ ಅದರ ಗುಣಮಟ್ಟವನ್ನು ಜಾಗತಿಕ ಆಶಯದ ಮಟ್ಟಕ್ಕೆ ಕೊಂಡೊಯ್ಯುವುದೂ ಸಹ ಅಷ್ಟೇ ಮುಖ್ಯ. ಕಳಪೆ ಶಿಕ್ಷಣವನ್ನು ಯುವ ಸಮುದಾಯಕ್ಕೆ ನೀಡುವುದೂ ಕೂಡ ಒಂದು ಸಾಮಾಜಿಕ ಅನ್ಯಾಯವಲ್ಲವೆ?
ಒಳ್ಳೆಯ ಶಿಕ್ಷಣವನ್ನು ಎಲ್ಲರಿಗೂ, ಏಕಕಾಲಕ್ಕೆ ನೀಡುವುದು ಸರ್ಕಾರಿ ವಲಯವೊಂದರಿಂದಲೇ ಸಾಧ್ಯವಾಗಿದ್ದಿದ್ದರೆ ಖಾಸಗಿ ಸಹಭಾಗಿತ್ವದ ಪ್ರಶ್ನೆಯೇ ಇರುತ್ತಿರಲಿಲ್ಲ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ಸ್ವಾತಂತ್ರ್ಯಾ ನಂತರ ಶಿಕ್ಷಣದ ಅವಕಾಶ ವಿಸ್ತರಣೆಗಾಗಿ ಖಾಸಗೀ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ನೀಡಿದ ಸಂವಿಧಾನಾತ್ಮಕ ಅವಕಾಶದಿಂದ ಇಂದು ಈ ವಲಯ ಅತ್ಯಂತ ಪ್ರಭಾವಿ ಮತ್ತು ಜವಾಬ್ದಾರಿಯುತ ವಲಯವಾಗಿ ಬೆಳೆದಿದೆ. ಇಂಥ ವಲಯಕ್ಕೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಅವಕಾಶ ನೀಡಿದರೆ ತಪ್ಪೇನು ಎನ್ನುವುದು ಕೆಲವರ ವಾದವಾದರೆ, ಶಿಕ್ಷಣ ಈಗಾಗಲೇ ವ್ಯಾಪಾರೀ ಸರಕಾಗಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳು ಲಾಭಕೋರರ ಉದ್ಯಮ, ಸಂಸ್ಥೆಗಳಾಗುತ್ತಿರುವಾಗ ಬೆಲೆ ತೆರಲಾಗದೆ ಯುವಕರಿಗೆ ಒಳ್ಳೆಯ ಶಿಕ್ಷಣದ ಅವಕಾಶ ವಂಚನೆಯಾಗಿ ಮತ್ತಷ್ಟು ಅಸಮಾನತೆಗೆ ಕಾರಣವಾಗುತ್ತದೆ ಎನ್ನುವ ಆತಂಕ ಮತ್ತೆ ಕೆಲವರದ್ದು.
ಜಾಗತಿಕ ವ್ಯಾಪಾರಕ್ಕೆ ಭಾರತವನ್ನು ಮುಕ್ತಗೊಳಿಸಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಅವಕಾಶ ನೀಡುತ್ತಿರುವಾಗ ದೇಶೀ ಖಾಸಗಿ ಸಂಸ್ಥೆಗಳಿಗೆ ಈ ಅವಕಾಶ ನಿರಾಕರಣೆ ಸಮರ್ಥನೆಯಾಗಲಾರದು. ಒಳ್ಳೆಯ ಖಾಸಗೀ ಹೋಟೆಲ್ನಂತೆ ಒಳ್ಳೆಯ ಖಾಸಗಿ ವಿಶ್ವವಿದ್ಯಾಲಯ ಇರಬಾರದೇಕೆ?
ಅಷ್ಟರ ಮಧ್ಯೆಯೂ ಸಾಮಾಜಿಕ ಕಾಳಜಿ ಮರೆತ ಯಾವುದೇ ಉದ್ಯಮ ಅಥವಾ ಸಂಸ್ಥೆ ದೀರ್ಘಕಾಲ ಉಳಿಯುವ ಸಾಧ್ಯತೆ ಇದೆಯೇ? ವಂಚನೆ ಮೂಲಕ ಕಪ್ಪುಪಟ್ಟಿಗೆ ಸೇರುವ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳ ಉದಾಹರಣೆಗಳನ್ನು ಮುಂದಿಟ್ಟುಕೊಂಡು ಸರ್ಕಾರ ಸ್ಥಾಪಿತ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಿಗಿಂತ ಒಳ್ಳೆಯ ಶಿಕ್ಷಣ ನೀಡುವ ಮತ್ತು ಈಗಾಗಲೇ ಅದನ್ನು ನಿರೂಪಿಸಿ ತೋರಿಸಿರುವ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಸ್ಥಾಪಿಸುವ ಅವಕಾಶ ನೀಡಿದರೆ ತಪ್ಪೇನು ಎನ್ನುವ ವಾದ ಕೂಡ ಅಲ್ಲಗಳೆಯುವಂಥದ್ದಲ್ಲ.
125 ಕೋಟಿ ಜನಸಂಖ್ಯೆಯುಳ್ಳ ಭಾರತದಲ್ಲಿ ಈಗಿರುವ ವಿಶ್ವವಿದ್ಯಾಲಯಗಳ ಸಂಖ್ಯೆ 650. ಅಮೆರಿಕಾದ 30 ಕೋಟಿ ಜನಸಂಖ್ಯೆಗಿರುವ ವಿಶ್ವವಿದ್ಯಾಲಯಗಳು 2500. ನಮ್ಮ ಪಕ್ಕದ ಚೀನಾ ಕಳೆದ ದಶಕದಲ್ಲಿ ತನ್ನ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಈಗಿರುವ ಶೇ 13ರಷ್ಟು ಉನ್ನತಶಿಕ್ಷಣ ಸಾಮಾನ್ಯ ಪ್ರವೇಶ ದರವನ್ನು 2020ನೇ ಇಸವಿಯೊಳಗೆ ಶೇ 25ಕ್ಕೆ ಏರಿಸಬೇಕಾದರೆ ಭಾರತೀಯ ಜ್ಞಾನ ಆಯೋಗದ ಪ್ರಕಾರ ಕನಿಷ್ಟ ಜಿಲ್ಲೆಗೊಂದು ವಿಶ್ವವಿದ್ಯಾಲಯ ಬೇಕಾಗಿದೆ.
ಒಂದು ವಿಶ್ವವಿದ್ಯಾಲಯ ಸ್ಥಾಪಿಸಲು ಈಗಿನ ಲೆಕ್ಕದಲ್ಲಿ ಸರ್ಕಾರಕ್ಕೆ ಕನಿಷ್ಟ ರೂ.500 ಕೋಟಿಗಳಾದರೂ ಬೇಕು. ಇಂಥದ್ದರಲ್ಲಿ ಖಾಸಗಿ ಸಂಸ್ಥೆಗಳು ಸರ್ಕಾರದ ಯಾವೊಂದು ಬಿಡಿಗಾಸು ಇಲ್ಲದೆ ಸರ್ಕಾರದ ಅಂಗಸಂಸ್ಥೆಯಾದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರೂಪಿಸಿರುವ ನಿಯಮಾವಳಿಗಳ ಪ್ರಕಾರವೇ ಅಚ್ಚುಕಟ್ಟಾಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾದರೆ ಅದನ್ನು ತಡೆಯುವ ಅಥವಾ ಹೀಗಳೆಯುವ ಮನೋಭಾವ ಅಭಿವೃದ್ಧಿ ವಿರೋಧಿ ಆಗಲಾರದೆ ?
ಶಿಕ್ಷಣ ವ್ಯಾಪಾರೀಕರಣ ಆಗಬಾರದೆಂದಾದರೆ ಇಡೀ ವ್ಯವಸ್ಥೆಯನ್ನು ಸರ್ಕಾರವೇ ನಿರ್ವಹಿಸಬೇಕು. ಇದು ಸಾಧ್ಯವೇ? ಇಲ್ಲವಾದಲ್ಲಿ ವ್ಯಾಪಾರವನ್ನಾದರೂ ಒಳ್ಳೆಯ ಗುಣಮಟ್ಟದ ನೆಲೆಯಲ್ಲಿ, ಒಪ್ಪಿತ ನಿಯಂತ್ರಿತ ವ್ಯವಸ್ಥೆಯಲ್ಲಿ, ಪ್ರಜಾಸತ್ತಾತ್ಮಕ ನಿಲುವುಗಳಿಗೆ ಧಕ್ಕೆಯಾಗದಂತೆ, ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ನಡೆಸುವ ಸ್ವಾತಂತ್ರ್ಯ ಖಾಸಗೀ ಸಂಸ್ಥೆಗಳಿಗೆ ನೀಡುವುದರಿಂದ ಆಗುವ ಅನಾನುಕೂಲಗಳೇನು? ಈ ಹಿನ್ನೆಲೆಯಲ್ಲಿ ವಿಶ್ರಾಂತ ಕುಲಪತಿಗಳ ವೇದಿಕೆ ಚರ್ಚೆಗೊಡ್ಡಿರುವ ಅಂಶಗಳು ಸ್ವಾಗತಾರ್ಹ. ಅಷ್ಟಾಗಿಯೂ ಅವರೆಲ್ಲ ಸರ್ಕಾರ ಸ್ಥಾಪಿತ ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡಿದ ತಜ್ಞರು ಎನ್ನುವುದನ್ನೂ ಮರೆಯುವಂತಿಲ್ಲ.
ಒಟ್ಟಿನಲ್ಲಿ ನಮ್ಮ ಯುವಕರಿಗೆ ಸ್ವಾವಲಂಬಿ ಬದುಕನ್ನು ಕಲಿಸುವ ಉನ್ನತಶಿಕ್ಷಣ ಸಮಾನವಾಗಿ ಸಿಗಬೇಕಾಗಿದೆ. ಇಲ್ಲಿ ಖಾಸಗೀ, ಸರ್ಕಾರಿ ವಿಶ್ವವಿದ್ಯಾಲಯ ಎನ್ನುವುದಕ್ಕಿಂತ ಒಳ್ಳೆಯ ಅಥವಾ ಕೆಟ್ಟ ವಿದ್ಯಾಲಯ ಎನ್ನುವುದಕ್ಕೆ ಬೆಲೆ ಕೊಡುವುದು ಅವಶ್ಯ. ಕೆಟ್ಟ ಮಾದರಿಗಳನ್ನು ಆಧರಿಸಿದ ನೇತ್ಯಾತ್ಮಕ ಧೋರಣೆಗಿಂತ ಒಳ್ಳೆಯ ಮಾದರಿಗಳನ್ನಾಧರಿಸಿದ ಧನಾತ್ಮಕ ನಿರ್ಧಾರಗಳು ಮೇಲಲ್ಲವೆ?
ಅಕ್ಕಮಹಾದೇವಿಯ ವಚನದ ಸಾಲೊಂದು ಹೀಗಿದೆ; `ಹಾವಿನ ಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು' ಧನಾತ್ಮಕ ನಿಯಂತ್ರಿತ ವ್ಯವಸ್ಥೆಯೊಳಗೆ ಖಾಸಗೀ ಸಂಸ್ಥೆಗಳ ಕಾರ್ಯೋನ್ಮುಖತೆ ನಿಜಕ್ಕೂ ಈ ಸಂದರ್ಭದಲ್ಲಿ ಅಪೇಕ್ಷಣೀಯ. ಆದರೆ ನಿಯಂತ್ರಣ ಎಂದರೆ ಉಸಿರು ಕಟ್ಟಿಸುವ, ಜಿಗುಪ್ಸೆ ಹುಟ್ಟಿಸುವ, ದಿವಾಳಿ ಎಬ್ಬಿಸುವ ನಿಯಮಗಳಾಗಬಾರದು.
Courtesy: Prajavani, May 02, 2013