- ರಾಜೇಂದ್ರ ಚೆನ್ನಿ (ಸಂಗ್ರಹ ರೂಪ: ದೇವನೂರ ಮಹಾದೇವ
ಮನುಷ್ಯರು ತಮ್ಮ ಓದು, ಬುದ್ಧಿಶಕ್ತಿ, ತರ್ಕ ಹಾಗೂ ಭಾಷೆಯನ್ನು ಮಾನವ ದ್ವೇಷಿಯಾದ ಬೌದ್ಧಿಕ ಕೆಲಸಗಳಿಗೆ ಏಕೆ ಬಳಸುತ್ತಾರೆ? ಪಾಂಡಿತ್ಯವೆಂದು ಕರೆಯಲಾಗುವ ಸಂಗತಿಯು ಒಂದು ವಲಯದಲ್ಲಿ ಅಂತಃಕರಣ, ಪ್ರೀತಿ, ಇತರರ ಬಗ್ಗೆ ಸದ್ಭಾವನೆ ಮುಂತಾದ ಭಾವನೆಗಳಿಂದ ಸಂಪೂರ್ಣ ಪರಕೀಯವಾಗಿ, ಕ್ರೂರವಾದ ಅಭಿಪ್ರಾಯಗಳನ್ನು ಸಮರ್ಥಿಸುವ `ತರ್ಕದ ಟಗರ ಹೋರಾಟ' ಯಾಕೆ ಆಗುತ್ತದೆ?
ಬಹುಸಂಖ್ಯಾತ ಜನರಿಗೆ ಮನುಷ್ಯರಾಗಿ ಬದುಕುವ ಅವಕಾಶಗಳೇ ಇಲ್ಲವಾಗುತ್ತಿರುವ ಬಡದೇಶದಲ್ಲಿ ಅತಿಶಯವಾದ ಸವಲತ್ತುಗಳನ್ನು ಪಡೆದಿರುವ ವಿಶ್ವವಿದ್ಯಾಲಯಗಳ ಬುದ್ಧಿಜೀವಿ ಹಾಗು ಸಂಶೋಧಕವರ್ಗವು ಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಉಡಾಫೆಯಿಂದ ತಿರಸ್ಕರಿಸುವ ದುಷ್ಟತನದ ಮೂಲವು ಎಲ್ಲಿದೆ? ನಿರ್ದಿಷ್ಟವಾಗಿ ಹೇಳುವುದಾದರೆ ಪಾಂಡಿತ್ಯ ಮತ್ತು ಬುದ್ಧಿಶಕ್ತಿಗಳು ಛಿಜ್ಝಿ ನ ಅತ್ಯಂತ ಆಳವಾದ ಕೆಡುಕಿನ ರೂಪಗಳೇಕೆ ಆಗುತ್ತವೆ?
ಈ ಮಾತುಗಳನ್ನು ಜಾತಿ ವ್ಯವಸ್ಥೆಯನ್ನು ಕುರಿತು ಎಸ್.ಎನ್.ಬಾಲಗಂಗಾಧರ ಮತ್ತು ಅವರ ಸಂಶೋಧನಾ ತಂಡದ ವಿಚಾರಗಳ ಫಲವಾದ `ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೇ?' ಕೃತಿಯ ಬಗ್ಗೆ ಹೇಳುತ್ತಿರುವೆ. ನನ್ನ ಅನುಭವದಲ್ಲಿ ಇದು ಕನ್ನಡದಲ್ಲಿ ಬಂದ ಅತ್ಯಂತ ದುಷ್ಟ ಕೃತಿಯಾಗಿದೆ. ಇಲ್ಲಿ ಪುನರಾವರ್ತನೆಯಾಗುವ ಬಾಲಗಂಗಾಧರರ ಮಾತು ಹೀಗಿದೆ:
`ಕನ್ನಡದ ಪ್ರಗತಿಪರ ಹೋರಾಟಗಾರರ ಜೊತೆ ನಾವು ತಲೆ ಹಾಳಾಗುವಷ್ಟು ಚರ್ಚೆ ಮಾಡಿದ್ದೇವೆ. ಈ ಚರ್ಚೆಗಳಲ್ಲಿ ನಾವು ಕಂಡುಕೊಂಡಿದ್ದೇನೆಂದರೆ, ಜಾತಿವ್ಯವಸ್ಥೆಯ ಚೌಕಟ್ಟು ಎಂದರೇನು ಎಂಬುದರ ಬಗ್ಗೆ ಅವರಾರಿಗೂ ಸ್ಪಷ್ಟತೆ ಇಲ್ಲ `- ಹೀಗೆ ಕೃತಿಯ ಉದ್ದಕ್ಕೂ ಬಾಲು ಸಂಶೋಧನಾ ತಂಡವು ಪ್ರಗತಿಪರರನ್ನೇ ಅಡ್ರೆಸ್ ಮಾಡುತ್ತದೆ.
ಉದಾಹರಣೆಗೆ ಈ ಕೃತಿಯ ಪ್ರಸ್ತಾವನೆಯಲ್ಲಿ ಡಂಕಿನ್ ಝಳಕಿಯವರು ಕಂಬಾಲಪಲ್ಲಿ ದುರಂತದ ಬಗ್ಗೆ ಮಾಡಿರುವ ಚರ್ಚೆಯನ್ನು ಗಮನಿಸಿ (ಪುಟ 9ರಿಂದ 13). ಕಂಬಾಲಪಲ್ಲಿಯ ದುರಂತದಲ್ಲಿ ಬಲಿಯಾದ ದಲಿತರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ನೆಪದಲ್ಲಿ ಈ ಸಂಶೋಧಕರು ಆ ಕಗ್ಗೊಲೆಯ ನಂತರ ಸರ್ಕಾರದಿಂದ ದಲಿತ ಸಮುದಾಯಕ್ಕೆ ನ್ಯಾಯ ಸಿಗದೇ ಇರುವುದಕ್ಕೆ ಪ್ರಗತಿಪರ ಬುದ್ಧಿಜೀವಿಗಳನ್ನು ಜವಾಬ್ದಾರರನ್ನಾಗಿ ಮಾಡುತ್ತಾರೆ.
ಅವರು ಹೇಳುತ್ತಾರೆ: ಒಂದು ಕ್ಷಣ ಯೋಚಿಸಿ ನೋಡಿ; ಆ ಘಟನೆ ಒಂದು ಅಪರಾಧದ ಘಟನೆಯಷ್ಟೆ ಆಗಿ ಉಳಿದಿದ್ದರೆ, ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಪೊಲೀಸ್ ಕ್ರಮವನ್ನು ಸರ್ಕಾರವೇ ತೆಗೆದುಕೊಳ್ಳಬಹುದಾಗಿತ್ತು. ಅಥವಾ ತೆಗೆದುಕೊಳ್ಳುವಂತೆ ಜನರೇ ಒತ್ತಡವನ್ನು ಹೇರಬಹುದಾಗಿತ್ತು. ಬದಲಾಗಿ, ಈ ಘಟನೆಯು `ಅಸ್ಪೃಶ್ಯತೆ' ಮತ್ತು `ಜಾತಿ ಶೋಷಣೆ'ಗೆ ಒಂದು ಉದಾಹರಣೆ ಎಂದು ನಮ್ಮ ಬುದ್ಧಿಜೀವಿ ವಲಯವು ಘೋಷಿಸುತ್ತಲೆ, ರಾಜ್ಯ(ಸರ್ಕಾರ)ವು ಈ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಶೋಷಿತರಿಗೆ ಪರಿಹಾರದ (ನಾವು ಮೇಲೆ ಕಾಣಿಸಿದ ಈ ಎರಡು) ಕ್ರಮಗಳನ್ನು ಕೈಗೊಳ್ಳುವ ಬದಲು `ಅಸ್ಪೃಶ್ಯತೆ' ಮತ್ತು `ಜಾತಿ ಶೋಷಣೆ' ಯನ್ನು ತೊಲಗಿಸುವುದು ಹೇಗೆ ಎಂದು ಯೋಚಿಸುತ್ತ ಕೂರುತ್ತದೆ. ಹೀಗೆ ಜಾತಿವ್ಯವಸ್ಥೆ ಕುರಿತ ತಪ್ಪು ತಪ್ಪು ಸಿದ್ಧಾಂತಗಳಿಂದಾಗಿ, ಒಂದು ಅಪರಾಧದ ಘಟನೆಯು ಸರಿಯಾದ ವಿವರಣೆಯೇ ಇಲ್ಲದ ಒಂದು `ಸಂಕೀರ್ಣ ಸಾಂಸ್ಕೃತಿಕ ಸಂಗತಿ'ಯಾಗಿ ಮಾರ್ಪಡುತ್ತದೆ .
ಇವರ ಈ ವಿಶ್ಲೇಷಣೆ ಇಲ್ಲಿಗೆ ನಿಲ್ಲುವುದಿಲ್ಲ- ಆಧುನಿಕ ಭಾರತದ ಎಲ್ಲಾ ಪ್ರಗತಿಪರ ಹೋರಾಟಗಾರರು ಇಂಥದೇ ಸೈದ್ಧಾಂತಿಕ ತಪ್ಪನ್ನು ಮಾಡುತ್ತಲೇ ಬಂದಿರುವುದರಿಂದ ನಮ್ಮ ಬಹುಪಾಲು ಸಮಸ್ಯೆಗಳು ಉಂಟಾಗಿವೆ. ಇವುಗಳಿಗೆ `ಹಿಂದೂಯಿಜಂ' ಅಥವಾ `ಜಾತಿವ್ಯವಸ್ಥೆ' ಕಾರಣಗಳಲ್ಲವೇ ಅಲ್ಲ. ಏಕೆಂದರೆ ಇವೆರಡೂ ನಿಜವಾಗಿ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ.ಇವು ಪಶ್ಚಿಮ ನಾಗರಿಕತೆಯು ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವದಲ್ಲಿ ತನ್ನನ್ನು ತಾನು (ಅಥವಾ ತನ್ನ ಅನುಭವವನ್ನು) ವಿವರಿಸಲು ಕಟ್ಟಿಕೊಂಡ ರಚನೆಗಳು.
ಈ ರಚನೆಗಳನ್ನು ಒಪ್ಪಿಕೊಂಡ ಪ್ರಗತಿಪರರು ಗೊತ್ತಿಲ್ಲದೆ ತಪ್ಪು ದಾರಿ ಹಿಡಿದರು - ಎಂಬ ಅವರ ವಾದಕ್ಕೆ ಉದಾಹರಣೆಯಾಗಿ ಜ್ಯೋತಿಬಾ ಫುಲೆ ಹಾಗೂ ಅಂಬೇಡ್ಕರರ ಪ್ರಸ್ತಾಪವಿದೆ. ಪುಟ 87ರಲ್ಲಿ ಅಂಬೇಡ್ಕರ್ ಮತ್ತು ಫುಲೆಯಂಥವರು ಭಾರತೀಯ ಸಮಾಜದಲ್ಲಿ ಅನ್ಯಾಯವನ್ನು ಅನುಭವಿಸಿದ್ದರು ಮತ್ತು ಅದನ್ನು ಬದಲಾಯಿಸಲು ಬಯಸಿದ್ದರು ಎಂದು ಒಪ್ಪಿಕೊಳ್ಳೋಣ, ಅಂತೆಯೇ ಒಪ್ಪಿಕೊಳ್ಳಬೇಕಾದ ಇನ್ನೊಂದು ವಿಚಾರವೆಂದರೆ ಇವರ ಕಹಿ ಅನುಭವಗಳು, ಅದರಿಂದ ಹುಟ್ಟಿದ್ದ ಧೋರಣೆಗಳು ಹಾಗೂ ನಕಾರಾತ್ಮಕವಾದ ಭಾವನೆಗಳು ತಕ್ಷಣವೇ ಹಿಂದೂ ಜಾತಿವ್ಯವಸ್ಥೆಯ ಕುರಿತ ಪ್ರೊಟೆಸ್ಟೆಂಟರ ಕಥೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಅದರ ಸಾಮಾಜಿಕ ಸ್ವರೂಪದ ಬಗೆಗಿನ ಅವರ ನಕಾರಾತ್ಮಕ ನೈತಿಕ ತೀರ್ಮಾನಗಳ ಜೊತೆ ತಳಕು ಹಾಕಿಕೊಂಡಿತು ಎನ್ನುತ್ತಾರೆ.
ಇಷ್ಟು ಮಾತ್ರವಲ್ಲ, ಅಂಬೇಡ್ಕರ್ ಹಾಗೂ ಫುಲೆಯವರ ಪ್ರೇರಣೆಯಿಂದ ಹುಟ್ಟಿಕೊಂಡ ಚಳವಳಿಗಳು ಈ ಕಾರಣದಿಂದಾಗಿಯೇ ಬಹುಪಾಲು ನಕಾರಾತ್ಮಕವಾಗಿದ್ದವು ಎಂದು ಈ ಸಂಶೋಧನಾ ತಂಡವು ವಾದಿಸುತ್ತದೆ.
ಮುಂದೆ ಈ ಬಾಲುಗುಂಪು- `ಈ ಮೂಲಕ ಒಂದೆಡೆ ಅನ್ಯಾಯದ ಯಾವುದಾದರೂ ಅನುಭವಗಳು ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧದ ಹೋರಾಟದ ನಡುವೆ ಸಂಬಂಧವನ್ನು ಬೆಸೆಯಲಾಯಿತು. ಇದು ಅತ್ಯಂತ ನಕಾರಾತ್ಮಕ ಭಾವನೆ ಮತ್ತು ನಡವಳಿಕೆಗಳಿಂದ ಪ್ರಚೋದಿತ ಮಾದರಿಯ ಸಾಮಾಜಿಕ ನ್ಯಾಯಕ್ಕಾಗಿನ ಚಳವಳಿಗಳನ್ನು ಹುಟ್ಟುಹಾಕಿತು. ಇಲ್ಲಿನ ಸಾಮಾಜಿಕ ಸ್ವರೂಪವನ್ನು ಮತ್ತು ಅದನ್ನು ಉಳಿಸಿಕೊಂಡು ಬರುವಂಥ ಗುಂಪು(ಬ್ರಾಹ್ಮಣ ಹಾಗೂ ಕೆಲವೊಮ್ಮೆ ಮೇಲ್ಜಾತಿ)ಗಳನ್ನು ನಾಶಪಡಿಸುವುದೊಂದೇ ನ್ಯಾಯವನ್ನು ತರಲು ಇರುವ ಮಾರ್ಗವೆಂದು ಈ ಚಳವಳಿಗಳು ವಾದಿಸಿದವು'(ಪು.89). ಅಂದರೆ ಅಂಬೇಡ್ಕರ್ ಹುಟ್ಟುಹಾಕಿದ ಚಳವಳಿಗಳು ಸೈದ್ಧಾಂತಿಕವಾಗಿ ತಪ್ಪಾಗಿದ್ದವು. ಮಾತ್ರವಲ್ಲ ಅದರಿಂದಾಗಿ ಕೇವಲ ಜಾತಿದ್ವೇಷವನ್ನು ಗಟ್ಟಿಗೊಳಿಸಿದವು ಎಂದು ಬಾಲೂಗುಂಪು ಫರ್ಮಾನು ಹೊರಡಿಸುತ್ತದೆ.
ಅಂಬೇಡ್ಕರ್ ಹಾಗೂ ಈ ದೇಶದ ದಲಿತ ಜನಾಂಗಗಳು, ಪ್ರಗತಿಪರರು ಪಾಲುಗೊಂಡಿದ್ದ ಚಳವಳಿಗಳನ್ನು ಈ ಕೃತಿಯು ಹೀಗೆ ಕಸದಬುಟ್ಟಿಗೆ ಎಸೆಯಲು ಪ್ರಯತ್ನಿಸಿರುವುದು ಕೃತಿಯ ಉದ್ದಕ್ಕೂ ಸ್ಪಷ್ಟವಾಗಿದೆ. ಇದಕ್ಕೆ ಪೂರಕವಾಗಿ, ಜಾತಿಯಿಂದಾಗಿ ಉಂಟಾಗಿದೆಯೆನ್ನಲಾಗುವ ತಾರತಮ್ಯದ ಕತೆಗಳು ವಸ್ತುಸಂಗತಿಗಳಲ್ಲವೆಂದು ವಾದಿಸಲಾಗಿದೆ. ಮಲಬಾರಿನಲ್ಲಿ ನಾಯರ್‌ಜಾತಿಯವರ ಎದುರು ಪರೆಯಾಗಳು ಬೀದಿಯಲ್ಲಿ ಬರಬಾರದು ಎಂಬುದನ್ನು ವಿವೇಕಾನಂದರು ಖಂಡಿಸಿದ ಸಂಗತಿಯೂ ಕೂಡಾ ವಸ್ತು ಸಂಗತಿಯಲ್ಲ, ಅದು ಜಾತಿ ತಾರತಮ್ಯದ ಕತೆಗಳಿಂದ ಪ್ರೇರಿತವಾದ ತಪ್ಪು ನಿರೂಪಣೆಯೆಂದು ಬಾಲು ವಾದಿಸುತ್ತಾರೆ.
ಇದೆಲ್ಲದರ ಪರಾಕಾಷ್ಠೆಯಾಗಿ, ನಾನು ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ, ವೈಚಾರಿಕ ದುಷ್ಟತನದ ಉದಾಹರಣೆಯನ್ನು ಈಗ ನೋಡಬಹುದು. `ಸಾಕ್ಷಿ' ಎಂಬ ಎನ್‌ಜಿಓ ಸಂಸ್ಥೆ ಹೊರತಂದ `ದ ದಲಿತ್ ಹ್ಯೂಮನ್ ರೈಟ್ಸ್ ಮಾನಿಟರ್' 1999-2000 ಎಂಬ ಹೊತ್ತಿಗೆಯಲ್ಲಿ ಏಪ್ರಿಲ್ 1999 ರಿಂದ ಮಾರ್ಚ್ 2000ದ ನಡುವೆ ದಲಿತರ ಮೇಲೆ ನಡೆದ ದೌರ್ಜನ್ಯದ ಸುಮಾರು 226 ಘಟನೆ ಹಾಗೂ ದಲಿತರ ಮೇಲೆ ನಡೆದ ದೌರ್ಜನ್ಯದ ಇಪ್ಪತ್ತು ವಾಸ್ತವ ವರದಿಗಳಿವೆ. ಇದರ ಬಗ್ಗೆ ಬಾಲು ಸಂಶೋಧನಾ ತಂಡವು ನೀಡುವ ಒಂದು ಟಿಪ್ಪಣಿಯನ್ನು ನನಗೆ ಗೊತ್ತಿರುವ ಹಾಗೆ ಹಿಟ್ಲರ್‌ನ ಅನುಯಾಯಿಗಳು ಯಹೂದಿಗಳ ಕೊಲೆಗಳ ಬಗ್ಗೆ ಮಾಡಿದ ಟಿಪ್ಪಣಿಗಳ ಹೊರತಾಗಿ ನಾಗರಿಕ ಜಗತ್ತಿನ ಇತಿಹಾಸದಲ್ಲಿ ಯಾರೂ ಮಾಡಿದಂತೆ ತೋರುವುದಿಲ್ಲ. ಟಿಪ್ಪಣಿಯು ಹೀಗಿದೆ- ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 24 ಪ್ರತಿಶತ ದಲಿತರೇ ಇರುವಾಗ... ಕೇವಲ 38 ಕೊಲೆಗಳಿಂದ ಭಾರತದಲ್ಲಿ ಜಾತಿಯ ತಾರತಮ್ಯತೆ ಇದೆಯೆಂದು ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ? (ಪು. 123) ಎಂದು ಪ್ರಶ್ನಿಸಿ ಈ ಹೇಳಿಕೆಗೆ ಕೊಟ್ಟಿರುವ ಅಡಿಟಿಪ್ಪಣಿಯಲ್ಲಿ `ಇಂಥ ದೊಡ್ಡ ಹೇಳಿಕೆಯನ್ನು ಸಮರ್ಥಿಸಲು ವಿಸ್ತಾರವಾದ ಸೈದ್ಧಾಂತಿಕ ಚರ್ಚೆ ಮತ್ತು ಒಂದು ಸಿದ್ಧಾಂತದ ಅವಶ್ಯಕತೆ ಇರುತ್ತದೆ' ಎನ್ನುತ್ತಾರೆ.
ಹೇಗಿದೆ ತರ್ಕ? ದಲಿತರ ಮೇಲೆ ದೌರ್ಜನ್ಯವೂ ನಡೆಯುತ್ತದೆ ಎಂದು ಸಾಬೀತು ಮಾಡಲು ಎರಡೇ ಉಪಾಯಗಳು! ಒಂದು, ದಲಿತರ ಶೇಕಡಾವಾರು ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೊಲೆಗಳನ್ನು ತಕ್ಷಣವೇ ನಾವೆಲ್ಲಾ ಮಾಡಬೇಕು! ಇದನ್ನು ದಲಿತ ಪರವಾಗಿರುವ ಪ್ರಗತಿಪರರೇ ಮಾಡಬೇಕು! ಏಕೆಂದರೆ ಈ ಕೃತಿಯ ಭಾಷೆಯಲ್ಲಿ ಅವರು ದಲಿತಪರವಾಗಿ ತಮ್ಮ ವಿಚಾರಗಳನ್ನು `ಮಾರಾಟ ಮಾಡಿ' ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ಇನ್ನೊಂದು ಉಪಾಯವೆಂದರೆ ಇಷ್ಟು ಸಣ್ಣ ಪ್ರಮಾಣದಲ್ಲಿ ದಲಿತರ ಕೊಲೆ ನಡೆಯುತ್ತಿರುವುದಕ್ಕಾಗಿ ಒಂದು ಸಿದ್ಧಾಂತವನ್ನು, ಕ್ರಿಶ್ಚಿಯನ್ ಥಿಯಾಲಜಿಯ ಹಾಗೂ ವಸಾಹತುಶಾಹಿಯ ಪ್ರಭಾವವಿಲ್ಲದ ಸಿದ್ಧಾಂತವನ್ನು ತಕ್ಷಣವೇ ಕಟ್ಟುವುದು. ನಮ್ಮ ಸಂವಿಧಾನ ಹಾಗೂ ನಾಗರಿಕ ಸಮಾಜದ ತಿಳಿವಳಿಕೆಯ ಪ್ರಕಾರ ಒಬ್ಬ ದಲಿತನ ಕೊಲೆಯಾದರೂ ಅದಕ್ಕೆ ನಾವೆಲ್ಲಾ ಆಘಾತಗೊಳ್ಳಬೇಕು. ಆದರೆ ಈ ಸಂಶೋಧನಾ ತಂಡದ ದುಷ್ಟ ತರ್ಕದ ಪ್ರಕಾರ ಅದು ಬೇಕಾಗಿಲ್ಲ.
ಈ ವಾದವನ್ನು ವಿಸ್ತರಿಸಿ ನೋಡಿ. ದೆಹಲಿಯಲ್ಲಿ ಐದು ವರ್ಷದ ಹಸುಳೆಯ ಮೇಲೆ ಲೈಂಗಿಕ ಅತ್ಯಾಚಾರವಾಗಿದೆ. ಇತ್ತೀಚೆಗೆ ಯುವತಿಯೊಬ್ಬಳ ಗ್ಯಾಂಗ್‌ರೇಪ್ ಆಗಿದೆ. ನಮ್ಮ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸಂಖ್ಯೆಗೆ ಅನುಗುಣವಾದ ಪ್ರಮಾಣದಲ್ಲಿ ಅತ್ಯಾಚಾರಗಳು ಆಗುವವರೆಗೆ ಇಂಥ ಘಟನೆಗಳು ಸ್ತ್ರೀಯರ ವಿರುದ್ಧ ಆಗುತ್ತಿರುವ ಅನ್ಯಾಯವೆಂದಾಗಲೀ ಅಥವಾ ಇಂಥ ಅಪರಾಧಗಳಿಗೆ ಸಮಾಜದಲ್ಲಿರುವ ಕೆಲವು ಸಂಗತಿಗಳಾಗಲೀ ಕಾರಣವೆಂದು ವಾದಿಸಬಾರದು. ಸ್ತ್ರೀವಾದಿಗಳಂತೂ ಮಾತನಾಡಲೇಬಾರದು. ಏಕೆಂದರೆ ಅವರು ಬಳಸುವ ಸ್ತ್ರೀವಾದೀ ಚೌಕಟ್ಟುಗಳು ಪಶ್ಚಿಮದಿಂದಲೇ ಬಂದಿವೆಯಲ್ಲವೇ?
ತಮಾಷೆ ನೋಡಿ, ಬಾಲುಗುಂಪಿನ ಪ್ರಕಾರ ಬ್ರಾಹ್ಮಣ ಒಳಪಂಗಡಗಳಲ್ಲಿ ಶ್ರೇಣೀಕರಣದ ಭಾವನೆಯಿಲ್ಲ. ಆದರೆ ಮುಸ್ಲಿಮರಲ್ಲಿ, ಲಿಂಗಾಯತರಲ್ಲಿ, ದಲಿತರೂ ಸೇರಿದಂತೆ ಕೆಳಜಾತಿಗಳಲ್ಲಿ ತಾರತಮ್ಯ ಮಾತ್ರವಲ್ಲ, ಶ್ರೇಣೀಕರಣದ ಗಟ್ಟಿಯಾದ ಭಾವನೆಗಳಿವೆಯಂತೆ.
ಬ್ರಿಟಿಷರು ತಮ್ಮ ಪ್ರೊಟೆಸ್ಟಂಟ್ ರಿಲಿಜನ್‌ನಿಂದಾಗಿ ಬ್ರಾಹ್ಮಣರನ್ನು ಪುರೋಹಿತಶಾಹಿ (ಪ್ರೀಸ್ಟ್‌ಲಿ ಕ್ಲಾಸ್) ಎಂದುಕೊಂಡು ಅವರನ್ನು ದೂರವಿಟ್ಟು, ಹೆಚ್ಚಾಗಿ ಮುಸ್ಲಿಂ, ಲಿಂಗಾಯತ, ದಲಿತರ ನಡುವೆ ಒಡನಾಡಿದ ಆ ಅನುಭವದ ದೆಸೆಯಿಂದಾಗಿ ಬ್ರಿಟಿಷರು ಜಾತಿವ್ಯವಸ್ಥೆಯೆಂದರೆ ತಾರತಮ್ಯ ಮತ್ತು ಶ್ರೇಣೀಕರಣವೆನ್ನುವ ಕಲ್ಪನೆಗೆ ಬಂದರು ಎನ್ನುತ್ತಾರೆ. ಇನ್ನೊಂದು ಕಡೆಗೆ ವಸಾಹತುಶಾಹಿ ಪ್ರಜ್ಞೆಯಿಂದಾಗಿ ಈ ಜಾತಿಗಳಿಂದ ಬಂದ (ಉದಾಹರಣೆಗೆ ಅಂಬೇಡ್ಕರ್) ಭಾರತೀಯ ಜಾತಿವ್ಯವಸ್ಥೆಯನ್ನು ಅನೈತಿಕ ಶ್ರೇಣೀಕರಣದ ವ್ಯವಸ್ಥೆಯೆಂದು ತಪ್ಪಾಗಿ ಗ್ರಹಿಸಿದರು ಎಂದೂ ಈ ಪರಿಕಲ್ಪನೆ ಈಗಿನ ಪ್ರಗತಿಪರರು, ಬುದ್ಧಿಜೀವಿಗಳಲ್ಲಿ ಹಾಗೇ ಉಳಿದಿದೆ ಎಂದೂ ಬಾಲೂಗುಂಪು ವಾದಿಸುತ್ತದೆ.
ಬಾಲು ಅವರ ಪ್ರಕಾರ ಇಂಥ ತಪ್ಪು ಗ್ರಹಿಕೆಯ ಜವಾಬ್ದಾರಿ ಕೆಳವರ್ಗ/ಜಾತಿಯವರದೇ ಹೊರತು ಬ್ರಾಹ್ಮಣರದಲ್ಲ! ತಾಳಿ, ನಾನು ಅವರ ವಾದವನ್ನು ತಿರುಚಿ ಹೇಳುತ್ತಿದ್ದೇನೆಂದು ಅಂದುಕೊಳ್ಳಬಹುದಾದ್ದರಿಂದ ಅವರ ಮಾತುಗಳನ್ನೇ ಉದ್ಧರಿಸುತ್ತೇನೆ: ಮಾದಿಗರಲ್ಲಿನ ಆಂತರಿಕ ರಚನೆ ಹಾಗೂ ಹೊಲೆಯರ ಜೊತೆಗಿನ ಅವರ ಒಡನಾಟದ ಸ್ವರೂಪವನ್ನು ಭಾರತೀಯ ಸಮಾಜದ ರಚನೆ ಎಂಬ ತಪ್ಪು ನಂಬಿಕೆಯನ್ನು ಬೆಳೆಸಿಕೊಂಡ ಐರೋಪ್ಯರು ಈ `ನಿಜ'ವನ್ನು ಒಳಗೊಳ್ಳಲು ಒಂದು ಸೈದ್ಧಾಂತಿಕ ಚೌಕಟ್ಟನ್ನು ಹುಡುಕಿದರು. ಹಾಗೂ ಅವರು ಅದನ್ನು ಪುರುಷಸೂಕ್ತ ಹಾಗೂ ಮನುಸ್ಮೃತಿಯಲ್ಲಿ ಕಂಡರು. ಅನಂತರ ಇಂಥ ರಚನೆಯನ್ನು ಎಲ್ಲರ ಮೇಲೆ ಬಲಾತ್ಕಾರವಾಗಿ ಹೇರಿದ `ಅಪರಾಧಿ'ಗಳಿಗಾಗಿ ಹುಡುಕಾಡಿದರು. ಅವರಿಗೆ `ಬ್ರಾಹ್ಮಣ ಪುರೋಹಿತರು' ಸಿಕ್ಕಿದರು (ಪು.233).
ಅಂದರೆ ಮಾದಿಗರು-ಹೊಲೆಯರು ತಮ್ಮ ಮಧ್ಯೆ ತಾರತಮ್ಯ, ಶ್ರೇಣೀಕರಣಗಳನ್ನು ಪಾಲಿಸಿದ್ದರಿಂದ ಐರೋಪ್ಯರು ಜಾತಿವ್ಯವಸ್ಥೆಯ ಸಿದ್ಧಾಂತವನ್ನು ಕಟ್ಟಲು ಕಾರಣವಾಯಿತು. ಆದ್ದರಿಂದ ಈ ಜಾತಿಗಳಿಂದ ಬರುವ ಎಲ್ಲಾ ಸಾಹಿತಿಗಳು, ಹೋರಾಟಗಾರರು ಜಾತಿ ವ್ಯವಸ್ಥೆಯ ಸಿದ್ಧಾಂತಕ್ಕೆ ತಮ್ಮವರ ಜಾತಿಗಳೇ ಮುಖ್ಯ ಕಾರಣವೆನ್ನುವ ಪಾಪಪ್ರಜ್ಞೆ ಬೆಳೆಸಿಕೊಳ್ಳಬೇಕು!-ಹೀಗೆ ಬಾಲು ಹೇಳಲಿಕ್ಕಿಲ್ಲವೆಂದುಕೊಳ್ಳಬೇಡಿ. ಕೆಳಜಾತಿಗಳಿಂದ ಬಂದ ಜಾತಿವ್ಯವಸ್ಥೆಯ ವಿರುದ್ಧ ಬಂಡೆದ್ದ ಪ್ರತಿಭಟನಾಕಾರರ ಬಗ್ಗೆ ಅವರು ಹೇಳುತ್ತಾರೆ: `ಇಷ್ಟನ್ನು ಹೇಳಬಹುದು! ಜಾತಿ ವ್ಯವಸ್ಥೆಯ ಕುರಿತು ಅವರಿಗಿರುವ ಗೀಳಿಗೆ ಕಾರಣ ಹೈರಾರ್ಕಿಯು ಅವರ ಜೀವನದಲ್ಲಿ ನಿತ್ಯ ಅನುಭವ. ಆದರೆ ಗಮನಿಸಬೇಕಾದ ವಿಚಾರವೆಂದರೆ, ಈ ಅನುಭವಕ್ಕೆ ಬ್ರಾಹ್ಮಣರು ಕಾರಣರಲ್ಲ. ಬದಲಿಗೆ ಅವರದೇ ಜಾತಿಯವರು' ( ಪು.233 ಮತ್ತು 234).
ಇಷ್ಟೆಲ್ಲ ಹೇಳಿದ ಮೇಲೆ ಈ ಸಂಶೋಧನಾ ತಂಡವು ಮೀಸಲಾತಿಯ ಬಗ್ಗೆ ಏನು ಹೇಳುತ್ತದೆ ಎಂದು ನೀವೇ ಊಹಿಸಬಹುದು. ಆದರೂ ಈ ಲೇಖನದ ಕೊನೆಯ ಮಾತು ಸಂಶೋಧನಾ ತಂಡದ್ದೇ ಆಗಲಿ ಎಂದು ಉದ್ಧರಿಸುತ್ತಿದ್ದೇನೆ: ಕಡಿಮೆ ಅಂಕಗಳನ್ನು ಗಳಿಸಿದರೂ ಮುಂದಿನ ತರಗತಿಗೆ ತೇರ್ಗಡೆಗೊಳಿಸುವ ಮತ್ತು ಕೆಲಸ ಕೊಡಿಸುವಂತಹ ಮೀಸಲಾತಿಯು ಜನರಿಗೆ ಹೆಚ್ಚು ಪರಿಶ್ರಮ ಪಡದೆಯೇ ಫಲವನ್ನು ಅನುಭವಿಸುವಂತೆ ಪ್ರೋತ್ಸಾಹಿಸುತ್ತದೆ (ಪು.177).
ಮೀಸಲಾತಿ ಪಡೆಯುವ ಜಾತಿಗಳು ಕ್ರಮೇಣ ಅವನತಿ ಹೊಂದುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಒಂದು ಜಾತಿಯನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದಿದ್ದರೆ ಆ ಜಾತಿಗೆ ಮೀಸಲಾತಿಯನ್ನು ಕೊಡಿ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ದಲಿತರ ಏಳಿಗೆಯಾಗದಿರಲು ಕಾರಣ ಜಾತಿವ್ಯವಸ್ಥೆಯಲ್ಲ. ಬದಲಿಗೆ ಅದಕ್ಕೆ ಕೊಟ್ಟ ಮೀಸಲಾತಿಯೆಂಬ ಔಷಧಿ (ಪು.178-179) - ಹೀಗಿವೆ ಇವರ ವಾದ ವೈಖರಿಗಳು.
ಓದುಗರೆ, ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಲು ಬಿಲ ತೋಡುತ್ತಿರುವ ವಿಧ್ವಂಸಕ ಇಲಿ ಹೆಗ್ಗಣಗಳ ಕೃತ್ಯದಂತೆ ಇಂಥ ಸಂಶೋಧನಾ ಚಟುವಟಿಕೆಗಳು ವಿಶ್ವವಿದ್ಯಾಲಯಗಳ ಒಳಗೊಳಗೇ ಜರುಗುತ್ತಿವೆ!
Courtesy: Prajavani, May 21, 2013