ಒಂದು ದೇಶದ ಅಭಿವೃದ್ಧಿಯು ಆ ದೇಶದ ವಿದ್ಯಾಭ್ಯಾಸದ ಮಟ್ಟವನ್ನು ಅವಲಂಬಿಸಿರುತ್ತದೆ. ಅಸಮರ್ಪಕವಾದ ವಿದ್ಯಾಭ್ಯಾಸ ಕ್ರಮವು ದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ವಿಶ್ವವಿದ್ಯಾಲಯಗಳ ಸುಧಾರಣೆಯು ಈ ಎಲ್ಲಾ ಕಾರಣಗಳಿಂದಾಗಿ ಅವಶ್ಯಕವಾಗಿದೆ.
ವಿದ್ಯಾರ್ಥಿಗಳು ತಮ್ಮ ವೃತ್ತಿಯಲ್ಲಿ ನೈಪುಣ್ಯ ಹೊಂದಲು, ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಮುಂದಿರುವಂತೆ ಮಾಡಲು, ಆರ್ಥಿಕ ಪ್ರಗತಿಯೊಡನೆ ನೈತಿಕ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಲು ಹಾಗೂ ನಗರಗಳೊಡನೆ ಹಳ್ಳಿಗಳ ಪ್ರಗತಿಯನ್ನೂ ಸುಧಾರಿಸಲು ಶಿಕ್ಷಣದ ಸುಧಾರಣೆ ಬೇಕಾಗಿದೆ.
`ಯುನೆಸ್ಕೊ'ದ ಡೆಲಾರ್ಸ್ ಕಮಿಷನ್ 21ನೇ ಶತಮಾನಕ್ಕೆ ಅಗತ್ಯವಿರುವ 4 ಆಧಾರಸ್ತಂಭಗಳನ್ನು ಗುರುತಿಸಿದೆ. ಅವುಗಳು ಹೀಗಿವೆ: ಜ್ಞಾನವನ್ನು ಪಡೆಯಲು ಕಲಿಯುವುದು (Learning to Know), ಗಳಿಸಿದ ಜ್ಞಾನವನ್ನು ಬಳಕೆಗೆ ಹಚ್ಚಲು ಕಲಿಯುವುದು (Learning to Do) ಮೈತ್ರಿಯಿಂದ ಬದುಕಲು ಕಲಿಯುವುದು (Learning to Live together) ಮತ್ತು ತಾನು ಸುಸ್ಥಿತಿಯಲ್ಲಿ ಇರಲು ಕಲಿಯುವುದು (Learning to be) .
21ನೇ ಶತಮಾನದಲ್ಲಿ ಉನ್ನತ ಶಿಕ್ಷಣದ ಸವಾಲುಗಳು ಅನೇಕ. ಜಾಗತೀಕರಣದ ಯುಗದಲ್ಲಿ ವಿದ್ಯಾಭ್ಯಾಸದ ಗತಿಯು ನಿಧಾನದ ಬದಲು ಕ್ಷಿಪ್ರವಾಗಬೇಕು. ಶಿಕ್ಷಣವು ಗುರು ಕೇಂದ್ರಿತವಾಗಿರದೆ ಶಿಷ್ಯ ಕೇಂದ್ರಿತವಾಗಬೇಕು. ಪಠ್ಯವು ವಿಷಯದೊಡನೆ ಕೌಶಲ ಮತ್ತು ಬಳಕೆಯ ವಿಧಿವಿಧಾನಗಳನ್ನು ಒಳಗೊಂಡಿರಬೇಕು. ವಿದ್ಯಾರ್ಥಿಗಳ ಕಲಿಕಾಕ್ರಮವು ನಿಷ್ಕ್ರಿಯವಾಗಿರದೆ ಸಕ್ರಿಯವಾಗಿರಬೇಕು. ಜ್ಞಾನಪ್ರದಾನವು ಗುರು ಕಲಿಸುವುದಕ್ಕಿಂತ ಹೆಚ್ಚಾಗಿ ಶಿಷ್ಯನ ಕಲಿತ ಅನುಭವವಾಗಬೇಕು.
ವಿದ್ಯಾರ್ಥಿಗಳು ಹಳೆಯ ಮುದ್ರಣದ ತಲೆಮಾರಿನಿಂದ ಕಂಪ್ಯೂಟರ್ ತಲೆಮಾರಿನತ್ತ ಸಾಗಬೇಕಿದೆ. ಶೈಕ್ಷಣಿಕ ಸೇವೆಯು ಏಕಸ್ಥಳ, ಏಕಕಾಲಕ್ಕೆ ಸೀಮಿತವಾಗಿರದೆ ಯಾವುದೇ ಸ್ಥಳ ಮತ್ತು ಯಾವುದೇ ಕಾಲದಲ್ಲಿ ಲಭ್ಯವಾಗಬೇಕು. ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಯಿಂದ ರಾಷ್ಟ್ರಮಟ್ಟ ಮತ್ತು ವಿಶ್ವಮಟ್ಟದಲ್ಲಿ ಸ್ಪರ್ಧೆ ಎದುರಿಸಲು ಶಕ್ತರಾಗಬೇಕು. ವಿದ್ಯಾರ್ಥಿಗಳ ಅವಶ್ಯಕತೆಯ ಪೂರೈಕೆಯು ಗೌಣವಾಗಿರದೆ ಪ್ರಧಾನವಾಗಿರಬೇಕು. ಅಧ್ಯಾಪಕರ ಉತ್ತರದಾಯಿತ್ವವು ವಿಶ್ವವಿದ್ಯಾಲಯಕ್ಕೆ ಸೀಮಿತವಾಗಿರದೆ ವಿದ್ಯಾರ್ಥಿಗಳು ಮತ್ತು ಸಮಾಜವನ್ನು ಒಳಗೊಳ್ಳಬೇಕು.
ವಿದ್ಯಾಭ್ಯಾಸ ಕ್ರಮದಿಂದ ನಗರಗಳೊಡನೆ ಹಳ್ಳಿಗಳ ಉದ್ಧಾರವೂ ಆಗಬೇಕು. ಉನ್ನತ ಗುಣಮಟ್ಟದ ಶಿಕ್ಷಣವು ಶ್ರೀಮಂತರ ಮಕ್ಕಳಂತೆ ಬಡವರ ಮಕ್ಕಳಿಗೂ ಲಭ್ಯವಾಗಬೇಕು. ಪದವೀಧರರು ಉದ್ಯೋಗ ಅರಸುವುದಕ್ಕಿಂತ ಹೆಚ್ಚಾಗಿ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಗಳಾಗಬೇಕು.
ವಿಶ್ವವಿದ್ಯಾಲಯಗಳ ಬಲವರ್ಧನೆಗೆ ಬಳಸಬಹುದಾದ 10 ಸೂತ್ರಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಕಲಿಕೆಯ ವಾತಾವರಣ: ಸೆಮಿಸ್ಟರ್ ಮತ್ತು ಕ್ರೆಡಿಟ್ ಪದ್ಧತಿಯ ಬಳಕೆ ಜೊತೆಗೆ ಕ್ಯಾಫೆಟೀರಿಯಾ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಯ ಸೌಲಭ್ಯ
ಇರಬೇಕು. ಮಹಾಭಾರತದ ಅರ್ಜುನನಂತೆ ಗುರುವಿನಿಂದ ವಿದ್ಯೆ ಪಡೆಯುವುದರೊಡನೆ ಏಕಲವ್ಯನಂತೆ ಗುರುವಿನ ನೆರವಿಲ್ಲದೆಯೂ ವಿದ್ಯೆ ಪಡೆಯುವಂತಾಗಬೇಕು . ಪದವೀಧರರು ತಂತಮ್ಮ ಕ್ಷೇತ್ರಗಳ ವಿಷಯಜ್ಞಾನದೊಡನೆ ಕೌಶಲವನ್ನೂ ಹೊಂದಬೇಕು. ಈ ಕಂಪ್ಯೂಟರ್ ಯುಗದಲ್ಲಿ ವಿದ್ಯಾರ್ಥಿಯು ಸ್ವಕ್ಷೇತ್ರಕ್ಕೆ ಸಂಬಂಧಿಸಿದ ಕಂಪ್ಯೂಟರ್ ಸಾಫ್ಟ್ವೇರ್ ಬಳಕೆಯಲ್ಲಿ ಪರಿಣತನಾಗಬೇಕು. ವಿದ್ಯಾರ್ಥಿಗಳು ಸಂವಹನಕಲೆಯಲ್ಲಿ ಪ್ರಾವೀಣ್ಯ ಪಡೆಯುವುದು ಅತ್ಯಗತ್ಯ.
ಕಲೆ, ಸಾಹಿತ್ಯ, ಸಂಗೀತಗಳಲ್ಲಿ ಪ್ರತಿಭೆಯಿರುವವರು ವಿದ್ಯಾಭ್ಯಾಸದೊಡನೆ ಅವುಗಳನ್ನೂ ರೂಢಿಸಿಕೊಳ್ಳಬೇಕು. ಯುವಜನರು ಯೋಗ, ಧ್ಯಾನಗಳ ಮೂಲಕ ಭಾವೋದ್ವೇಗಗಳನ್ನು ನಿಯಂತ್ರಿಸುವುದು ಆರೋಗ್ಯಕ್ಕೆ ಅಗತ್ಯ.
ಅಧ್ಯಾಪನ ಕ್ಷೇತ್ರದ ಬಲವರ್ಧನೆ: ತತ್ತ್ವಸಿದ್ಧಾಂತಗಳೊಡನೆ ಪ್ರಯೋಗಶೀಲತೆಗೂ ಆದ್ಯತೆಯಿರುವ ಪಠ್ಯಕ್ರಮ ರೂಪಿಸುವುದು ಇಂದಿನ ಅಗತ್ಯ. ಉದ್ಯಮಶೀಲತೆಯನ್ನು ಹುರಿದುಂಬಿಸುವುದಲ್ಲದೆ ಸಹಮಾನವರು ಮತ್ತು ಪರಿಸರದೊಡನೆ ಸಹಬಾಳ್ವೆಗೆ ಅನುವಾಗುವ ಪಠ್ಯಕ್ರಮ ರೂಪಿಸಬೇಕು. ಅಧ್ಯಾಪಕರು ಅಧ್ಯಾಪನದೊಡನೆ, ಸಂಶೋಧನೆಗಳಲ್ಲಿ ಮಾರ್ಗದರ್ಶಿಗಳಾಗಿ ಸಂಶೋಧನಾ ತಂಡಗಳನ್ನು ಬೆಳೆಸುವಂತಿರಬೇಕು.
ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಾ ಅಧ್ಯಾಪಕರು ಜೀವನಪರ್ಯಂತ ವಿದ್ಯಾರ್ಥಿಗಳಾಗಿರುವುದು ಅವಶ್ಯ. ದೇಶೀಯ, ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುವುದು ಮತ್ತು ಅವುಗಳಲ್ಲಿ ಭಾಗವಹಿಸುವುದು, ಇಂಟರ್-ಡಿಸಿಪ್ಲಿನರಿ ಕೋರ್ಸುಗಳನ್ನು ಪ್ರಾರಂಭಿಸುವುದು, ಹೊಚ್ಚ ಹೊಸ ಕ್ಷೇತ್ರಗಳಲ್ಲಿ ಕೋರ್ಸುಗಳನ್ನು ಪ್ರಾರಂಭಿಸುವ ಉತ್ಸಾಹಶೀಲತೆಯೂ ಅಧ್ಯಾಪಕ ವರ್ಗದಲ್ಲಿರಬೇಕು.
ಪರೀಕ್ಷಾ ವಿಧಾನದ ಸುಧಾರಣೆ: ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಪರೀಕ್ಷಾ ಪ್ರಾಧಿಕಾರ ಸ್ಥಾಪನೆ ಕಟ್ಟುನಿಟ್ಟಾಗಿ ಆಗಬೇಕು. ಸ್ನಾತಕೋತ್ತರ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಮಾನ ಪ್ರವೇಶ ಪರೀಕ್ಷೆ, ಆಂತರಿಕ ಮೌಲ್ಯಮಾಪನ ಅಂಕಗಳನ್ನು ಸರಿದೂಗಿಸುವುದು, ಬಹು ಆಯ್ಕೆಯ ಪ್ರಶ್ನೆಗಳ ಬಳಕೆ, ಪರೀಕ್ಷಾ ವ್ಯವಸ್ಥೆಯನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಮಾಡಿಸುವುದು - ಹೀಗೆ ಅನೇಕ ನೆಲೆಗಳಲ್ಲಿ ಸುಧಾರಣೆಗಳನ್ನು ತರಬೇಕಿದೆ. ಪರೀಕ್ಷಾ ಪದ್ಧತಿಗಳಲ್ಲಿ ಏಕರೂಪತೆ ಇರಬೇಕು. ಕಾಲೇಜು ಪ್ರಾಧ್ಯಾಪಕರನ್ನು ಮಾತ್ರವೇ ಕುಲಸಚಿವರಾಗಿ (ಪರೀಕ್ಷಾಂಗ) ನೇಮಕ ಮಾಡುವುದೂ ಅಗತ್ಯ.
ವಿ.ವಿ.ಯ ಗುಣಮಟ್ಟದ ಸುಧಾರಣೆ ಮತ್ತು ಮಾಪನ: `ನ್ಯಾಕ್' ಮೊದಲಾದ ಸಂಸ್ಥೆಗಳಿಂದ ಗುಣಮಾಪನ ಪರೀಕ್ಷೆಯು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಗುಣಮಟ್ಟದ ಸುಧಾರಣೆಗೆ ಅತ್ಯವಶ್ಯ. ಗುಣಮಟ್ಟದ ಪರೀಕ್ಷೆಯನ್ನು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ತಜ್ಞಸಮಿತಿಗಳಿಂದ ಮಾಡಿಸುವುದು ಕೂಡ ಪ್ರಯೋಜನಕಾರಿ. ಜಾಗತಿಕವಾಗಿ ಪ್ರಸಿದ್ಧವಾಗಿರುವ ವಿದ್ಯಾಸಂಸ್ಥೆಯ ಆದರ್ಶದಲ್ಲಿ ಸ್ಥಳೀಯ ವಿದ್ಯಾಸಂಸ್ಥೆಯನ್ನು ಮುಂದೊಯ್ಯುವುದು ಪರಿಣಾಮಕಾರಿ. ವಿದ್ಯಾರ್ಥಿಗಳಿಂದ ಅಧ್ಯಾಪಕರ ಗುಣಮಟ್ಟದ ಅಳತೆಗಳು ಕೂಡ ಅತ್ಯವಶ್ಯಕ.
ಸಂಶೋಧನೆ, ಸೃಜನಶೀಲತೆ, ನಾವೀನ್ಯತೆ, ಮತ್ತು ಬೌದ್ಧಿಕ ಆಸ್ತಿಯ ರಕ್ಷಣೆ : ಸಂಶೋಧನಾಂಗ, ಬೋಧನಾಂಗ ಮತ್ತು ಪ್ರಸಾರಾಂಗಗಳು ಯಾವುದೇ ವಿದ್ಯಾಸಂಸ್ಥೆಯ ಪ್ರಮುಖ ಅಂಗತ್ರಯಗಳು. ಸಂಶೋಧನೆಯು ಯಾವುದೇ ವಿದ್ಯಾಕ್ಷೇತ್ರವನ್ನು ಮುಂದೆ ಕೊಂಡೊಯ್ಯುವ ಅಮೂಲ್ಯ ಸಾಧನ. ಜಾಗತಿಕ ಮಟ್ಟದ ಸಂಶೋಧನೆಗೆ ಒತ್ತುಕೊಡುವುದು ವಿಶ್ವವಿದ್ಯಾಲಯಗಳ ಕೀರ್ತಿಯನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಗುಣಮಟ್ಟವನ್ನು ಕಾಪಾಡುವುದೂ ಅತ್ಯವಶ್ಯಕ. ಬೌದ್ಧಿಕ ಆಸ್ತಿಯ ರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯ.
ಗಳಿಸಿದ ಜ್ಞಾನವನ್ನು ಬಳಕೆಗೆ ಹಚ್ಚಲು ಕಲಿಯುವುದು: ಯಾವುದೇ ಕ್ಷೇತ್ರದಲ್ಲಿ ಪಡೆದ ತಾತ್ತ್ವಿಕ ಜ್ಞಾನವನ್ನು ಪ್ರಯೋಗಕ್ಕೆ ಹಚ್ಚುವ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನೀಡುವುದು ಅಗತ್ಯವಾಗಿ ಆಗಬೇಕಾದ ಕೆಲಸ. ಉದಾಹರಣೆಗೆ ಇತಿಹಾಸದ ವಿದ್ಯಾರ್ಥಿಗಳು ಆರ್ಕಿಯಾಲಜಿ, ಕಲಾವಸ್ತುಗಳ ಸಂರಕ್ಷಣೆ ಮೊದಲಾದವುಗಳಲ್ಲಿ ಆಸಕ್ತಿ, ಕೌಶಲ ಬೆಳೆಸಿಕೊಳ್ಳಬಹುದು.
ಭೂಗರ್ಭಶಾಸ್ತ್ರದ ವಿದ್ಯಾರ್ಥಿಗಳು ಮಣ್ಣು ಮತ್ತು ಶಿಲೆಗಳ ಗುರುತುಹಿಡಿಯುವುದು, ರಿಮೋಟ್ ಸೆನ್ಸಿಂಗ್.., ಭಾಷೆ, ಸಾಹಿತ್ಯದ ವಿದ್ಯಾರ್ಥಿಗಳು ಮಾತೃಭಾಷೆಯ ಡಿಟಿಪಿ, ಕತೆ, ಕವನ, ಲೇಖನಕಲೆ, ಅನುವಾದಕಲೆ.... ಅರ್ಥಶಾಸ್ತ್ರದ ವಿದ್ಯಾರ್ಥಿಗಳು ಸಾರ್ವಜನಿಕ ವಿತರಣೆ, ಮೈಕ್ರೋಪ್ಲಾನ್... ರಾಜಕೀಯಶಾಸ್ತ್ರದ ವಿದ್ಯಾರ್ಥಿಗಳು ಪಂಚಾಯತ್ರಾಜ್, ವಯಸ್ಕರ ಶಿಕ್ಷಣ..., ಸಮಾಜಶಾಸ್ತ್ರದ ವಿದ್ಯಾರ್ಥಿಗಳು ತಂಡಸ್ಫೂರ್ತಿ, ಧಾರ್ಮಿಕ ಸಾಮರಸ್ಯ..., ಕಾಮರ್ಸ್ ವಿದ್ಯಾರ್ಥಿಗಳು ಸಣ್ಣಕೈಗಾರಿಕೆಗಳ ಸ್ಥಾಪನೆ, ಬ್ಯಾಂಕಿಂಗ್ ಸೇವೆ...ಮನಶಾಸ್ತ್ರದ ವಿದ್ಯಾರ್ಥಿಗಳು ಯೋಗ, ಧ್ಯಾನ, ವ್ಯಕ್ತಿತ್ವವಿಕಾಸ ಮೊದಲಾದವುಗಳಲ್ಲಿ ಕೌಶಲ ಬೆಳೆಸಿಕೊಳ್ಳಬಹುದು.
ವಿಶ್ವ ಚಿಂತನೆ ಮತ್ತು ಸ್ಥಳೀಯ ಕಾರ್ಯಗಳು: ನಮ್ಮ ಉನ್ನತ ಶಿಕ್ಷಣವನ್ನು ಏಷ್ಯಾದ ಇತರ ದೇಶಗಳತ್ತ, ಅರೇಬಿಯಾದತ್ತ, ಆಫ್ರಿಕಾ ದೇಶಗಳತ್ತ ಒಯ್ಯುವುದು. ಅಮೆರಿಕ, ಕೆನಡಾ, ಯುರೋಪಿನ ದೇಶಗಳತ್ತ ನಮ್ಮ ಭಾಷೆ, ಸಮಾಜಶಾಸ್ತ್ರ, ಭಾರತೀಯ ಕಲೆ, ಸಂಗೀತ, ಯೋಗಗಳಿಗೆ ಸಂಬಂಧಿಸಿದ ಕೋರ್ಸುಗಳನ್ನು ಒಯ್ಯುವುದು ಅಗತ್ಯ.
ಸ್ಥಳೀಯ ವಿದ್ಯಾಸಂಸ್ಥೆಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧವಾಗಿರುವ ವಿದ್ಯಾಸಂಸ್ಥೆಗಳ ಜತೆ ಒಪ್ಪಂದಗಳನ್ನು (ಖಿ) ಮಾಡಿಕೊಂಡು ಮುಂದುವರಿಯುವುದು ಬಹಳ ಪ್ರಯೋಜನಕಾರಿ. ಸ್ಥಳೀಯ ಪ್ರಾಮುಖ್ಯತೆಯಿರುವ ಬೀಜ ತಂತ್ರಜ್ಞಾನ, ಕೃಷಿ ಮಾರುಕಟ್ಟೆ ಮೊದಲಾದ ನವೀನ ಕೋರ್ಸುಳು ಹಾಗೆಯೇ ಮಹಿಳೆಯರ ಕುರಿತಾದ ಹೊಸಬಗೆಯ ಕೋರ್ಸುಗಳನ್ನು ಆರಂಭಿಸುವ ಮೂಲಕ ಉನ್ನತ ಶಿಕ್ಷಣದ ಪ್ರಸ್ತುತತೆಯನ್ನು ಹೆಚ್ಚಿಸಬಹುದು.
ಶಿಕ್ಷಣವನ್ನು ಮೌಲ್ಯಾಧಾರಿತವಾಗಿಸುವುದು: ಗಾಂಧಿ, ಅಂಬೇಡ್ಕರ್, ವಿವೇಕಾನಂದ, ಬಸವೇಶ್ವರ ಮೊದಲಾದ ಮಹಾಪುರುಷರ ಜನ್ಮದಿನಗಳನ್ನು ಪೂರ್ವಾಹ್ನ ಮೌಲ್ಯದಿನಗಳಾಗಿ ಆಚರಿಸಿ ಅಪರಾಹ್ನ ಮಾತ್ರ ರಜಾದಿನಗಳಾಗಿ ಮಾಡುವುದು. ಎನ್ಎಸ್ಎಸ್ ಮತ್ತು ಎನ್ಸಿಸಿ ಇವುಗಳಲ್ಲಿ ಯಾವುದಾದರೊಂದನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಕಡ್ಡಾಯ ಮಾಡಬೇಕು.
ಸಮಾನತೆ ಮತ್ತು ಸಮಾನ ಅವಕಾಶಗಳು: ವಿದ್ಯಾಭ್ಯಾಸದಿಂದ ವಂಚಿತರಾದವರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ಸಮಾಜದ ಹೊಣೆಗಾರಿಕೆ. ಸರ್ಕಾರಿ ಅನುದಾನಿತ ವಿಶ್ವವಿದ್ಯಾಲಯಗಳಿಗೆ ಸರ್ಕಾರವು ಹೆಚ್ಚಿನ ಧನಸಹಾಯವನ್ನು ನೀಡಿ ಅವು ಖಾಸಗಿ ವಿಶ್ವದ್ಯಾಲಯಗಳು ಮತ್ತು ವಿದೇಶಿ ವಿವಿಗಳೊಡನೆ ಸ್ಪರ್ಧಿಸಲು ಅನುವು ಮಾಡಿಕೊಡಬೇಕು
ಆಡಳಿತ: ಕಾರ್ಯನಿರ್ವಹಣೆಗೆ ಅಧ್ಯಾಪಕರನ್ನು ವಿವಿಧ ಹಂತಗಳಲ್ಲಿ ಬಳಸುವ ವ್ಯವಸ್ಥೆ ಬೇಕು. ವಿಶ್ವವಿದ್ಯಾಲಯಗಳ ಅಧಿಕಾರ ಮತ್ತು ಹೊಣೆಗಾರಿಕೆಗಳನ್ನು ವಿಕೇಂದ್ರೀಕರಿಸಿ ಎಲ್ಲಾ ವಿಭಾಗಗಳ ಉತ್ತರದಾಯಿತ್ವವನ್ನು ಹೆಚ್ಚಿಸಬೇಕು.
ದೀರ್ಘಕಾಲದ ಯೋಜನೆಗಳನ್ನು ಮಾಡಿ ಕಾಲಕಾಲಕ್ಕೆ ಅವುಗಳ ಮೌಲ್ಯಮಾಪನ ಮಾಡಬೇಕು. ಸಂಶೋಧನೆ ಮತ್ತು ಪ್ರಸಾರಾಂಗಗಳಿಗೆ ಬೋರ್ಡುಗಳನ್ನು ಮಾಡುವುದು. ಹಾಗೆಯೇಉನ್ನತ ಶಿಕ್ಷಣ ಪರಿಷತ್ತನ್ನು ಸ್ಥಾಪಿಸಿ ಅದರ ಮೂಲಕ ವಿಶ್ವದ್ಯಾಲಯಗಳ ಯೋಜನೆಗಳು ಮತ್ತು ಗುಣಮಟ್ಟವನ್ನು ಪರೀಕ್ಷಿಸುವಂತಾಗಬೇಕು. ಪೂರ್ಣಮಟ್ಟದ ಗುಣಮಟ್ಟ ನಿರ್ವಹಣೆಯನ್ನು (ಕಿ) ವಿಶ್ವವಿದ್ಯಾಲಯ ಮಟ್ಟದಲ್ಲಿ ಜಾರಿಗೊಳಿಸಬೇಕು.
Courtesy: Prajavani June 29, 2013