ರಾಜ್ಯದಲ್ಲಿಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಬೋಧಕ–-ಬೋಧಕೇತರ ಸಿಬ್ಬಂದಿಯ ಅನುದಾನ ರಹಿತ ಸೇವಾವಧಿಯ ಪದೋನ್ನತಿ ಮತ್ತು ಸೇವಾ ಸೌಲಭ್ಯದಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಈ ಸಿಬ್ಬಂದಿಯ ವೇತನ ಕಡಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ.
ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಸುಮಾರು ೨೦–-೩೦ ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಅವರ ಹುದ್ದೆಗಳನ್ನು ಸರ್ಕಾರ ಕೆಲ ವರ್ಷಗಳ ಹಿಂದಷ್ಟೆ ವೇತನಾನುದಾನಕ್ಕೆ ಒಳಪಡಿಸಿದೆ. ತಾನೇ ೧೯೯೫ ರಲ್ಲಿ ರೂಪಿಸಿದ್ದ ನಿಯಮಗಳ ಪ್ರಕಾರ ಅವರ ಹುದ್ದೆಗಳಿಗೆ ಸೇವಾ ಜೇಷ್ಠತೆ ಮತ್ತು ವೇತನ ಬಡ್ತಿಯನ್ನು ಸರ್ಕಾರವೇ ನೀಡಿದೆ. ಈ ಮೂಲಕ ಹಲವಾರು ವರ್ಷಗಳಿಂದ ಸಲ್ಲಿಸಿದ ಸೇವೆಗೆ ಮಾನ್ಯತೆ ನೀಡಿ, ಘನತೆಯನ್ನು ಮೆರೆದು ಅಧ್ಯಾಪಕರ ಸಾತ್ವಿಕ ಜೀವನಕ್ಕೆ ದಾರಿ ಮಾಡಿಕೊಟ್ಟಿತ್ತು. ಸರ್ಕಾರಿ ಕಾಲೇಜು ಅಧ್ಯಾಪಕರಷ್ಟು ಸೌಲಭ್ಯಗಳು ಸಿಗದಿದ್ದರೂ ಖಾಸಗಿ ಅನುದಾನಿತ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿಯು ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಜೀವನ ಮತ್ತು ವೃತ್ತಿ ನಡೆಸುತ್ತಾ ಬಂದಿದ್ದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್‌ಗಳನ್ನು ಆರಂಭಿಸುವಾಗ ಸರ್ಕಾರವೇ ಅನುದಾನ ನೀಡುವ ವಾಗ್ದಾನ ಮಾಡಿದೆ. ಅದಕ್ಕೆ ತಕ್ಕನಾಗಿ ಸರ್ಕಾರ ಅನುದಾನ ನೀಡದಿದ್ದರೂ ಅಧ್ಯಾಪಕರು ತಮ್ಮ ವೃತ್ತಿಯನ್ನು ಮುಂದುವರೆಸಿಕೊಂಡು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿ, ಅವರನ್ನು ಉತ್ತಮ ನಾಗರಿಕರನ್ನಾಗಿ ತಯಾರಿಸುವಲ್ಲಿ ಶ್ರಮಿಸಿದ್ದಾರೆ. ರಾಜ್ಯ ಹಾಗೂ ದೇಶದ ಶಿಕ್ಷಣ ಮಟ್ಟವನ್ನು ಏರಿಸುವಲ್ಲಿ ಆರ್ಥಿಕ, ಸಾಮಾಜಿಕ ಸಂಕಷ್ಟದ ಮಧ್ಯೆಯೂ ತಮ್ಮ ವೃತ್ತಿಯ ಹಿರಿಮೆಯನ್ನು ಮೆರೆಸಿದ್ದಾರೆ.
ಈಗ ಸರ್ಕಾರ, ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರ ಅನ್ನ ಕಸಿಯಲು ಮುಂದಾ ಗಿದೆ. ಅನುದಾನಿತ ಅಧ್ಯಾಪಕರಿಗೆ ಅನುದಾನ ರಹಿತ ಅವಧಿಯ ಸೇವೆಯನ್ನಷ್ಟೇ ಪರಿಗಣಿಸಿ ವೇತನ ನಿಗದಿ ಮಾಡಿ ಕೋರ್ಸ್/ವಿಷಯ ವೇತನಾನುದಾನಕ್ಕೆ ಒಳಪಟ್ಟ ದಿನಾಂಕದಿಂದ ಆರ್ಥಿಕ ಸೌಲಭ್ಯ ನೀಡುತ್ತಿದೆ. ಆದರೆ ಅನುದಾನ ರಹಿತ ಅವಧಿಗೆ ಆರ್ಥಿಕ ಸೌಲಭ್ಯ ನೀಡಿಲ್ಲ. ಈಗಾಗಲೇ ಈ ಅವಧಿಯ ಆರ್ಥಿಕ ಸೌಲಭ್ಯದಿಂದ ಈ ಸಮುದಾಯ ವಂಚಿತವಾಗಿದೆ. ಈ ಅವಧಿಯಲ್ಲಿ ಶಿಕ್ಷಕರು ನೀಡಿದ ಸೇವೆ ಸಮಾಜ ಹಾಗೂ ದೇಶಕ್ಕಲ್ಲವೆ? ಇವರಿಂದ ಕಲಿತ ವಿದ್ಯಾರ್ಥಿಗಳು ದೇಶದ ನಾಗರಿಕರಾಗಿಲ್ಲವೆ?
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವೇತನ ಹಾಗೂ ಇತರ ಸೌಲಭ್ಯಗಳು ದೊರೆಯುವುದು ಸಹ ವಿಳಂಬವೆ. ವೇತನ ಕೂಡ ಪ್ರತಿ ತಿಂಗಳು ೧೦–-೧೫ ದಿನ ಕಳೆದ ಮೇಲೆ ಬರುತ್ತದೆ. ತಿಂಗಳಾನುಗಟ್ಟಲೆ ವಿಳಂಬವಾಗಿ ವೇತನ ನೀಡಿದ ಉದಾಹರಣೆಗಳೂ ಇವೆ. ಕೆಲಬಾರಿ ಅನುದಾನಿತ ಶಿಕ್ಷಕನಿಗೆ ಕೊಡಬೇಕಾದ ಆರ್ಥಿಕ ಸೌಲಭ್ಯಗಳನ್ನು ಕೊಡದೆ ಬಹಳ ಕಾಲದವರೆಗೆ ಹಾಗೆ ಇಟ್ಟುಕೊಳ್ಳುವುದರಿಂದ ದೊಡ್ಡ ಮೊತ್ತವಾಗಿ ಕಾಣುತ್ತದೆ. ಅದರೆ ಈ ಸಮಸ್ಯೆ ಸರ್ಕಾರಿ ಸಿಬ್ಬಂದಿಗಿಲ್ಲ. ಸೇವಾ ನಿಯಮಗಳು ಮತ್ತು ಸೇವೆಗೆ ಮಾತ್ರ ಸರ್ಕಾರಿ ಮತ್ತು ಅನುದಾನಿತ ಸಿಬ್ಬಂದಿ ಎಂಬ ತಾರತಮ್ಯ ಇಲ್ಲ. ಆರ್ಥಿಕ ಹಾಗೂ ಇತರೆ ಸೌಲಭ್ಯಗಳಿಗೆ ಮಾತ್ರ ಅನುದಾನಿತ ಸಿಬ್ಬಂದಿಗೆ ಈ ಮಲತಾಯಿ ಧೋರಣೆ ಏಕೆ?
ರಾಜ್ಯದ ಎಲ್ಲಾ ಅನುದಾನಿತ ಸಿಬ್ಬಂದಿಗೆ ಏಕಕಾಲಕ್ಕೆ ವೇತನ ಸಿಗದು, ಸಮಯಕ್ಕೆ ಬಡ್ತಿ ಸಿಗದು, ಡಿ.ಎ., ಎಚ್. ಆರ್.ಎ. ಬಾಕಿ ಪಾವತಿಯ ವ್ಯಥೆಯಂತೂ ಹೇಳತೀರದು. ಪಿಎಚ್.ಡಿ., ಎಂ.ಫಿಲ್ ಮಾಡಿದವರಿಗೆ ಒಂದೊಂದು ಜಂಟಿ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಒಂದೊಂದು ರೀತಿಯಲ್ಲಿ ವೇತನ ಬಡ್ತಿ (ಇನ್‌ಕ್ರಿಮೆಂಟ್) ನೀಡಲಾಗಿದೆ. ಕೆಲಕಡೆ, ಸರ್ಕಾರಿ ಹಂತದಲ್ಲೇ ಚರ್ಚೆಯಲ್ಲಿದೆ ಎಂಬ ನೆಪ ಮುಂದೊಡ್ಡಿ ಪಿಎಚ್.ಡಿ, ಎಂ.ಫಿಲ್ ಮಾಡಿದವರಿಗೆ ಹಲವಾರು ವರ್ಷಗಳಿಂದ ಇನ್‌ಕ್ರಿಮೆಂಟ್ ಕೊಟ್ಟಿಲ್ಲ. ಇದಕ್ಕೆ ಕಾರಣ ಅನುದಾನಿತರೆಂಬ ಭಾವನೆ ಇಲಾಖೆಯವರಲ್ಲಿ ಇರುವುದು ಇರಬಹುದು. ಮೇಲಿನ ಸೌಲಭ್ಯ ಪಡೆದುಕೊಳ್ಳಲು ಬೋಧಕ ಬೋಧಕೇತರರು ನಿರಂತರವಾಗಿ ಹೋರಾಡಬೇಕಾದ ಸ್ಥಿತಿ ಮೂಡಿದೆ. ಇದು ಯಾರಿಗೆ ಶೋಭೆ?
ಒಂದು ವೇಳೆ ಖಾಸಗಿ ಕಾಲೇಜುಗಳಿಗೆ ಅನುದಾನ ನಿಲ್ಲಿಸಬೇಕೆಂಬ ಸಂಕಲ್ಪ ಸರ್ಕಾರಕ್ಕೆ ಇದ್ದರೆ ಈಗಾಗಲೇ ಅನುದಾನಕ್ಕೊಳಪಡಿಸಿದ ಕಾಲೇಜು ಸಿಬ್ಬಂದಿಯ ಸೇವಾವಧಿ ಮುಗಿಯುವ ತನಕ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿ. ಅವರಿಗೆ ಸಲ್ಲಬೇಕಾದ ಸೌಲಭ್ಯ ನೀಡಲಿ. ಅವರ ಸೇವೆಯನ್ನು ಪಡೆದುಕೊಳ್ಳಲಿ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಖಾಸಗಿ ಅನುದಾನಿತ ಕಾಲೇಜುಗಳ ಸಿಬ್ಬಂದಿಯ ಅನುದಾನರಹಿತ ಸೇವಾವಧಿಯನ್ನು ಸೇವಾ ಜೇಷ್ಠತೆಗೆ ಪರಿಗಣಿಸುವಂತೆ ಹೈಕೋರ್ಟು ನೀಡಿದ್ದ ತೀರ್ಪಿನ ವಿರುದ್ಧ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ಮೇಲ್ಮನವಿಯೂ ತಿರಸ್ಕೃತಗೊಂಡಿದೆ. ಇದರಿಂದ ಕೋರ್ಟ್ ತೀರ್ಪು ಅನುಷ್ಠಾನ ಗೊಳಿಸಬೇಕಾದ ಪರಿಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದೊದಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುತ್ತದೆ ಎಂದು ಇದರಿಂದ ಪಾರಾಗಲು ತಾನು ಕೊಟ್ಟಿದ್ದನ್ನು ತನ್ನ ಕೈಯಿಂದಲೇ ಕಸಿದುಕೊಳ್ಳುಲು ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಿಬ್ಬಂದಿ (ವೇತನ, ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳ ನಿಯಂತ್ರಣ) ಅಧಿನಿಯಮ - ೨೦೧೪ ಕಾಯಿದೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿರುವುದು ವಿವೇಚನಾರಹಿತ ಹಾಗೂ ಅಪ್ರಬುದ್ಧತೆಯ ಪ್ರತೀಕ.
ಅಧ್ಯಾಪಕರ ಮೇಲೆ ಸರ್ಕಾರಕ್ಕೆ ಇಷ್ಟೇಕೆ ಕೋಪ? ಅರ್ಥಿಕ ಹೊರೆ ಆಗುತ್ತದೆ ಎಂದು ಸರ್ಕಾರ ಭಾವಿಸಿದರೆ ಅವರು ಪಡೆಯುವ ವೇತನ ನಿರುಪಯುಕ್ತ ಸೇವೆಗೇನೂ ಅಲ್ಲವಲ್ಲ?
ಇಳಿವಯಸ್ಸು, ಅನಾರೋಗ್ಯ, ವಯಸ್ಸಿನ ಸಮಸ್ಯೆಗಳು ಬಾಧಿಸುವ ಸಮಯದಲ್ಲಿ ಕೊಟ್ಟಿರುವುದನ್ನು ಕಸಿದುಕೊಳ್ಳುವುದು ಯಾವುದೇ ಸರ್ಕಾರಕ್ಕೆ ಗೌರವ ತರದು, ಮಾದರಿಯೆನಿಸದು. ಅನುದಾನಿತ ಶಿಕ್ಷಕರ ಸೇವೆ ಬಗ್ಗೆ ಅನ್ಯಥಾ ಭಾವನೆ ಇದ್ದರೆ ಅವರ ಕಿವಿ ಹಿಂಡಿ ಕೆಲಸ ತೆಗೆದುಕೊಳ್ಳಬೇಕಾದ್ದು ಸರ್ಕಾರದ ಹೊಣೆ. ವೃತ್ತಿಯನ್ನು ನಿರ್ಲಕ್ಷಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈ ಗೊಳ್ಳಲಿ, ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರನ್ನು ಸಜ್ಜುಗೊಳಿಸಲಿ, ಯಾವುದೇ ಕಾರಣಕ್ಕೂ ಶಿಕ್ಷಕರ ನೈತಿಕ ಸ್ಥೈರ್ಯ ಕುಗ್ಗದಂತೆ ಸರ್ಕಾರ ನೋಡಿ ಕೊಳ್ಳಲಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಕಿಕೊಂಡಿರುವ ಉನ್ನತ ಶಿಕ್ಷಣದ ಯೋಜನೆಯ ಗುರಿ ೨೦೩೦ರ ಹೊತ್ತಿಗೆ ಶೇ ೩೨ ರಷ್ಟು ತಲುಪಲು ಅಧ್ಯಾಪಕರನ್ನು ಸಜ್ಜು ಮಾಡಲಿ. ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಸರ್ವಸ್ವವಾಗಿರುವಾಗ ಶಿಕ್ಷಣ ನೀಡುವವರ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲದು ಮತ್ತು ದೇಶದ ಅಭಿವೃದ್ದಿಗೆ ಮಾರಕವಾದುದು ಎಂಬುದರಲ್ಲಿ ಎರಡು ಮಾತಿಲ್ಲ.