ಬೆಂಗಳೂರು: ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಒಂದು ವಾರದ ಬೋಧನಾ ಅವಧಿಯನ್ನು 22 ಗಂಟೆಗಳಿಗೆ ಹೆಚ್ಚಿಸಲು ಕಾಲೇಜು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಆದರೆ, ಈ ಪ್ರಸ್ತಾವಕ್ಕೆ ಪ್ರಾಧ್ಯಾಪಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈಗ ಜಾರಿಯಲ್ಲಿರುವ ನಿಯಮದ ಪ್ರಕಾರ, ಪ್ರಾಧ್ಯಾಪಕರು ಒಂದು ವಾರಕ್ಕೆ 16 ಗಂಟೆ ಪಾಠ ಮಾಡಬೇಕು (ಪ್ರಾಯೋಗಿಕ ತರಗತಿಗಳಿರುವ ವಿಜ್ಞಾನ ವಿಷಯಗಳಲ್ಲಿ ಈ ಅವಧಿ 20 ತಾಸು). ಹೊಸ ನಿಯಮ ಜಾರಿಗೆ ಬಂದರೆ ಪ್ರಾಧ್ಯಾಪಕರು ಪ್ರತಿ ವಾರ 22 ಗಂಟೆ ಬೋಧನೆ ಮಾಡಬೇಕಾಗುತ್ತದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಈ ಸಂಬಂಧ ಶೀಘ್ರ ಆದೇಶ ಹೊರ ಬೀಳಲಿದೆ ಎಂದು ಮೂಲಗಳು ಹೇಳಿವೆ.
ನಿಯಮದಲ್ಲಿ ಏನಿದೆ?: ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಪ್ರಾಧ್ಯಾಪಕರು ಕನಿಷ್ಠ 40 ಗಂಟೆ ಕಾರ್ಯನಿರ್ವಹಿಸಬೇಕು. ಇದರಲ್ಲಿ 16 ಗಂಟೆಗಳನ್ನು ಬೋಧನೆಗೆ, ಆರು ಗಂಟೆ ಅಧ್ಯಯನ ಮತ್ತು ಸಂಶೋಧನೆಗೆ ಮೀಸಲಿಡಬೇಕು. ಉಳಿದ ಸಮಯವನ್ನು ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು.
ರಾಜ್ಯದಲ್ಲಿ ಪ್ರಸ್ತುತ ಇದೇ ನಿಯಮ ಜಾರಿಯಲ್ಲಿದೆ. ಆದರೆ, ಹೆಚ್ಚಿನ ಕಾಲೇಜುಗಳಲ್ಲಿ ಪ್ರಾಧ್ಯಾಪಕರು ಸಂಶೋಧನೆ, ಅಧ್ಯಯನಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗದೇ ಇರುವುದರಿಂದ ಅದಕ್ಕಾಗಿ ಮೀಸಲಾಗಿರುವ 6 ಗಂಟೆ ಬೋಧನೆಗೆ ಬಳಸುವ ಲೆಕ್ಕಾಚಾರ ಇಲಾಖೆಯದ್ದು.
‘ವಿದ್ಯಾರ್ಥಿಗಳ ಅನುಕೂಲಕ್ಕೆ’ ಬೋಧನಾ ಅವಧಿಯನ್ನು 22 ಗಂಟೆಗೆ ಏರಿಸುವುದಕ್ಕೆ ಸಿದ್ಧತೆ ನಡೆದಿದೆ. 40 ಗಂಟೆಗಳಲ್ಲಿ ಆರು ಗಂಟೆ ಕಾಲ ಪ್ರಾಧ್ಯಾಪಕರು ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಬೇಕು. ಆದರೆ, ನಮ್ಮ ಪದವಿ ಕಾಲೇಜುಗಳಲ್ಲಿ ಅದು ನಡೆಯುತ್ತಿಲ್ಲ. ಆ ಸಮಯವನ್ನು ಬೋಧನೆಗೆ ಮೀಸಲಿಡುವ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಮಾಡುವ ಉದ್ದೇಶ ಹೊಂದಿದ್ದೇವೆ. |
ಪ್ರಾಧ್ಯಾಪಕರ ವಿರೋಧ: ಆದರೆ ಸಾಧಕ ಬಾಧಕಗಳನ್ನು ಚರ್ಚಿಸದೆ, ಸಂಬಂಧಿಸಿದವರ ಅಭಿಪ್ರಾಯ ಪಡೆಯದೆ ಇಲಾಖೆಯು ಹೊಸ ನಿಯಮ ಜಾರಿಗೆ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ‘ಬೋಧನಾ ಅವಧಿಗೆ ಸಂಬಂಧಿಸಿದಂತೆ 2009ರಲ್ಲಿ ಛಡ್ಡಾ ಸಮಿತಿ ನಿಮಯಗಳನ್ನು ರೂಪಿಸಿದೆ. ಇಲ್ಲಿ ಪಠ್ಯಗಳನ್ನು ಎರಡು ವಿಭಾಗಗಳಾಗಿ ಮಾಡಲಾಗಿದೆ. ಒಂದು ಪ್ರಾಯೋಗಿಕ ತರಗತಿಗಳನ್ನು ಒಳಗೊಂಡ ವಿಷಯಗಳು; ಇನ್ನೊಂದು ಇತರ ವಿಷಯಗಳು. ಪ್ರಾಧ್ಯಾಪಕರ ಶ್ರೇಣಿಗೆ ಅನುಗುಣವಾಗಿ ಬೋಧನಾ ಅವಧಿ ನಿರ್ಧರಿಸಲಾಗಿದೆ. ಅದರ ಪ್ರಕಾರ, ಪ್ರಾಯೋಗಿಕ ವಿಷಯಗಳ ಸಹಾಯಕ ಪ್ರಾಧ್ಯಾಪಕರು ಪ್ರತಿ ವಾರ 20 ಗಂಟೆ, ಇತರ ವಿಷಯಗಳ ಪ್ರಾಧ್ಯಾಪಕರು 16 ಗಂಟೆ ಪಾಠ ಮಾಡಬೇಕು. ಸಹ ಪ್ರಾಧ್ಯಾಪಕರು ಕ್ರಮವಾಗಿ 18 ಮತ್ತು 14 ಗಂಟೆ ಬೋಧಿಸಬೇಕು’ ಎಂದು ಕರ್ನಾಟಕ ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಸಿ. ರಾಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗ ಜಾರಿಯಲ್ಲಿರುವ ನಿಯಮ ಸರಿಯಾಗಿಯೇ ಇದೆ. ತಂತ್ರಜ್ಞಾನದ ಈ ದಿನಗಳಲ್ಲಿ ಹಳೆಯ ಸರಕುಗಳನ್ನೇ ಹಿಡಿದು ವಿದ್ಯಾರ್ಥಿಗಳಿಗೆ ಬೋಧಿಸಲು ಸಾಧ್ಯವಿಲ್ಲ. ನಾವು ಕಾಲಕ್ಕೆ ತಕ್ಕಂತೆ ಆಯಾ ವಿಷಯಗಳಲ್ಲಿ ಪಕ್ವವಾಗಬೇಕಾಗುತ್ತದೆ. ಒಂದು ಗಂಟೆ ಪಾಠ ಮಾಡಬೇಕಾದರೆ, ಅದಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೊಸ ನಿಯಮವು ಪ್ರಾಧ್ಯಾಪಕರಿಗಲ್ಲದೇ ವಿದ್ಯಾರ್ಥಿಗಳಿಗೂ ಹೊರೆಯಾಗಲಿದೆ’ ಎಂದು ಹೇಳಿದರು.
ಅತಿಥಿ ಉಪನ್ಯಾಸರು ಮನೆಗೆ?: ರಾಜ್ಯದಲ್ಲಿರುವ 10 ರಿಂದ 12 ಸಾವಿರ ಅತಿಥಿ ಉಪನ್ಯಾಸಕರನ್ನು ಮನೆಗೆ ಕಳುಹಿಸುವ ಯೋಚನೆ ಇದರ ಹಿಂದಿದೆ ಎಂದು ಮತ್ತೊಬ್ಬ ಪ್ರಾಧ್ಯಾಪಕರು ಆರೋಪಿಸಿದರು.
‘ಈಗ ಅತಿಥಿ ಉಪನ್ಯಾಸಕರು ಒಂದು ವಾರಕ್ಕೆ 10 ಗಂಟೆ ಪಾಠ ಮಾಡುತ್ತಾರೆ. ರೂ8 ಸಾವಿರದಿಂದ ರೂ10 ಸಾವಿರ ವೇತನ ನೀಡಲಾಗುತ್ತದೆ. ಬೋಧನಾ ಅವಧಿಯನ್ನು ಆರು ಗಂಟೆ ಹೆಚ್ಚಿಸುವ ಮೂಲಕ, ಅತಿಥಿ ಉಪನ್ಯಾಸಕರನ್ನು ನೇಮಕ ಮಾಡದೆಯೇ ಕಾಲೇಜುಗಳನ್ನು ನಡೆಸುವ ಯೋಚನೆ ಇಲಾಖೆಯದ್ದು’ ಎಂಬುದು ಅವರ ದೂರು.
Courtesy: ಪ್ರಜಾವಾಣಿ , 09-11-2014