ಶಿಕ್ಷಣದಲ್ಲಿ ಕನ್ನಡದ ಸ್ಥಾನ ಎಂದಿನಿಂದಲೂ ಚರ್ಚೆಯ ವಿಷಯವಾಗಿದೆ. ಪ್ರೌಢ ಶಾಲೆಯಲ್ಲಿ ಕನ್ನಡವನ್ನು ಏಕೈಕ ಪ್ರಥಮ ಭಾಷೆಯನ್ನಾಗಿಸಿ ಸರ್ಕಾರವು 1982ರ ಜುಲೈ 20 ರಂದು ಹೊರಡಿಸಿದ ಆದೇಶವು ಭಾಷಾ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕಿಗೆ ಧಕ್ಕೆ ತರುತ್ತದೆಯೆಂದು ರಾಜ್ಯ ಹೈಕೋರ್ಟ್ ಅದನ್ನು ರದ್ದು ಮಾಡಿದಾಗ 1983ರ ಜೂನ್ 19ರಂದು ಹೊಸ ಆದೇಶವನ್ನು ಹೊರಡಿಸಲಾಯಿತು.
ಈ ಆದೇಶದ ಪ್ರಕಾರ ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮ, ಕನ್ನಡೇತರ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಕನ್ನಡ ಐಚ್ಛಿಕ ಪಠ್ಯ ಅಳವಡಿಕೆ ಪ್ರೌಢಶಾಲೆಯಲ್ಲಿ ಪ್ರಥಮ ಭಾಷೆ ಪಟ್ಟಿಯಲ್ಲಿ ಕನ್ನಡದ ಜೊತೆಗೆ ಉರ್ದು, ಮುಂತಾದ ಭಾಷೆಗಳ ಸೇರ್ಪಡೆಯಾಯಿತು.
ಆದರೆ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮದ ಅಂಶವನ್ನು ಪ್ರಶ್ನಿಸಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಯವರು ಕಾನೂನು ಸಮರ ಸಾರಿದರು. ಈ ‘ಸಮರ’ ಸುಪ್ರೀಂಕೋರ್ಟ್‌ವರೆಗೆ ಹೋಗಿ 1993ರಲ್ಲಿ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರದ 1989ರ ಆದೇಶವನ್ನು ಎತ್ತಿ ಹಿಡಿದು ಕನ್ನಡ ಅಥವಾ ಮಾತೃಭಾಷಾ ಮಾಧ್ಯಮಕ್ಕೆ ಮನ್ನಣೆ ನೀಡಿತು. ಅಷ್ಟೇ ಅಲ್ಲ ‘ಭಾಷಾ ನೀತಿಯನ್ನು ಹೇಗೆ ಅಳವಡಿಸಬೇಕೆಂದು ರಾಜ್ಯಕ್ಕೆ ತಿಳಿದಿದೆ.
ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಿತು. ಆನಂತರ ಕರ್ನಾಟಕ ಸರ್ಕಾರವು 1994ರ ಏಪ್ರಿಲ್ 23ರಂದು ಹೊಸ ಆದೇಶ ಹೊರಡಿಸಿ, ಹಿಂದಿನ ಅಂಶಗಳ ಜೊತೆಗೆ ಒಂದರಿಂದ ನಾಲ್ಕನೇ ತರಗತಿಯವರೆಗೆ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕೊಡುವುದಿಲ್ಲವೆಂದು ಹೇಳಿತು. ಈ ಆದೇಶದ ವಿರುದ್ಧದ ಕಾನೂನು ಸಮರವು ಮತ್ತೆ ಸುಪ್ರೀಂಕೋರ್ಟಿನವರೆಗೆ ಹೋದಾಗ 1999ರಲ್ಲಿ ಸರ್ಕಾರದ ಆದೇಶಕ್ಕೆ ಮತ್ತೆ ಮನ್ನಣೆ ಸಿಕ್ಕಿತು. ಆದರೆ ಮತ್ತೊಂದು ಮೊಕದ್ದಮೆಯಲ್ಲಿ ರಾಜ್ಯ ಹೈಕೋರ್ಟ್ 2008ರ ಜುಲೈ 3ರಂದು ಸರ್ಕಾರದ 1994ರ ದೇಶವನ್ನು ರದ್ದುಪಡಿಸಿತು.
ಸುಪ್ರೀಂಕೋರ್ಟ್ ಸಹ 2014ರ ಮೇನಲ್ಲಿ ರಾಜ್ಯ ಹೈಕೋರ್ಟ್‌ನ ತೀರ್ಪನ್ನು ಎತ್ತಿ ಹಿಡಿದು ತನ್ನ 1993 ಮತ್ತು 1999ರ ತೀರ್ಪುಗಳಿಗೆ ವಿರುದ್ಧವಾಗಿ ವರ್ತಿಸಿತು. ಪುನರ್ ಪರಿಶೀಲನಾ ಅರ್ಜಿಗೂ ಮನ್ನಣೆಯಿಲ್ಲ. ಒಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿಷಯಕ್ಕೆ ಸರ್ಕಾರ ಹೋಗಬಾರದೆಂಬ ಹೊಸ ನೀತಿಯ ಕರಾಳ ಅಧ್ಯಾಯ ಆರಂಭವಾಯಿತು.. ಈಗ ಈ ವಿಷಯದಲ್ಲಿ ರಾಜ್ಯ ಸರ್ಕಾರವನ್ನು ಆಕ್ಷೇಪಿಸುವಂತಿಲ್ಲ. ಯಾಕೆಂದರೆ ಸುಪ್ರೀಂಕೋರ್ಟಿನ ತೀರ್ಪಿನಿಂದಾಗಿ ಸರ್ಕಾರವು ‘ಸುರಕ್ಷಿತ ವಲಯ’ದಲ್ಲಿದೆ! ಆದರೆ ಈ ‘ಸುರಕ್ಷಿತ ವಲಯ’ದ ಮಾತನ್ನು ಕಾಲೇಜು ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನಕ್ಕೆ ಕುರಿತಂತೆ ಹೇಳುವಂತಿಲ್ಲ.
ಕಾಲೇಜು ಶಿಕ್ಷಣದಲ್ಲಿ ಕನ್ನಡವನ್ನು ಒಳಗೊಂಡಂತೆ ಭಾಷಾ ಬೋಧನೆ ಬಗ್ಗೆ ನಿರ್ದಿಷ್ಟ ನೀತಿಯೇ ಇಲ್ಲ. ಒಂದೊಂದು ವಿಶ್ವವಿದ್ಯಾಲಯವು ಒಂದೊಂದು ಕ್ರಮವನ್ನು ಅಳವಡಿಸಿಕೊಳ್ಳುತ್ತ ಕನ್ನಡವನ್ನು ನಿಧಾನವಾಗಿ ಹಿಂದಿನ ಸಾಲಿನಲ್ಲಿ ಕೂಡಿಸಲಾಗುತ್ತಿದೆ. ಇದು ಜಾಗತೀಕರಣದ ಹೆಸರಿನಲ್ಲಿ ಆಗುತ್ತಿರುವ ಆದ್ಯತೆಗಳ ಪಲ್ಲಟದ ಫಲ.
ಭಾಷಾ ಬೋಧನೆಯು ಕಾಲೇಜು ಶಿಕ್ಷಣದಲ್ಲಿ ಭಾಷೆಯ ಕಲಿಕೆಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕೆಯ ಹಂತವಾದರೆ, ಕಾಲೇಜು ಶಿಕ್ಷಣದಲ್ಲಿ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿ ಭಾಷಾ ಬೋಧನೆಯು ಕೆಲಸ ಮಾಡುತ್ತದೆ. ಆದ್ದರಿಂದ ವಾಣಿಜ್ಯ, ವೃತ್ತಿ ಶಿಕ್ಷಣ, ವಿಜ್ಞಾನ, ಮಾನವಿಕ – ಯಾವುದೇ ವಿಷಯವನ್ನು ಕಲಿಯುವ ಕೋರ್ಸುಗಳಲ್ಲಿ ಭಾಷಾ ಬೋಧನೆಗೆ ತನ್ನದೇ ಆದ್ಯತೆಯಿರಬೇಕಾಗುತ್ತದೆ.
ಈ ಮೂಲಕ ತನ್ನ ವಿಶೇಷ ಆಯ್ಕೆಯ ಪಠ್ಯದ ಜೊತೆಗೆ ಬದುಕನ್ನು ಅರ್ಥಮಾಡಿಕೊಳ್ಳಲು ಬೇಕಾದ ಸಾಮಾಜಿಕ– ಸಾಂಸ್ಕೃತಿಕ ತಿಳಿವಳಿಕೆಯನ್ನು ಪ್ರಧಾನವಾಗಿ ಕನ್ನಡ ಅಥವಾ ಭಾಷಾ ಬೋಧನಾ ಪಠ್ಯಗಳ ಮೂಲಕ ಪಡೆಯಬಹುದಾಗಿದೆ. ಸಾಮಾಜಿಕ – ಸಾಂಸ್ಕೃತಿಕ ತಿಳಿವಳಿಕೆಯಿಲ್ಲದ ಉನ್ನತ ಶಿಕ್ಷಣವು ಶುಷ್ಕ ವಾಣಿಜ್ಯ ವ್ಯಕ್ತಿತ್ವಗಳನ್ನು ರೂಪಿಸುವ ಅಪಾಯವಿದೆ. ಆದ್ದರಿಂದ ಕನ್ನಡ ಪಠ್ಯಕ್ಕೆ ಪ್ರಾಮುಖ್ಯ ಸಿಗಬೇಕಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಉಳಿಸಿಕೊಳ್ಳುವ ಸಹಜ ಹುರುಪು ಮತ್ತು ಹೋರಾಟದ ನೆಲೆಯು ಕಾಲೇಜು ಶಿಕ್ಷಣಕ್ಕೆ ವಿಸ್ತರಣೆಗೊಂಡಿಲ್ಲವೆಂಬುದು ವಿಷಾದದ ಸಂಗತಿ.
ಈಗ ವಿವಿಧ ವಿ.ವಿಗಳಲ್ಲಿರುವ ಭಾಷಾ ಪಠ್ಯದ ಸ್ಥಿತಿಯತ್ತ ಗಮನ ಕೊಡೋಣ. ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಇಂಗ್ಲಿಷ್ ಪಠ್ಯ ಕಡ್ಡಾಯ. ಇಂಗ್ಲಿಷಿನ ಜೊತೆಗೆ ಒಂದು ಭಾರತೀಯ ಭಾಷೆಯನ್ನು ಕಲಿಯಬೇಕು. ಭಾರತೀಯ ಭಾಷೆಗಳ ಗುಂಪಿನಲ್ಲಿ ಕನ್ನಡಕ್ಕೆ ಸ್ಥಾನ. ಬೇರೆ ಭಾಷೆಗಳನ್ನು ಕಲಿಯುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾಗ ಅವರಿಗೆ ಅವಕಾಶವಿದ್ದೇ ಇದೆ. ಹೀಗಾಗಿ ಕನ್ನಡದ ಜೊತೆಗೆ ಉರ್ದು, ಹಿಂದಿ, ಸಂಸ್ಕೃತ, ಕೆಲವು ಕಡೆ ತಮಿಳು, ತೆಲುಗು ವಿಭಾಗಗಳು ಇವೆ.
ಈ ಎಲ್ಲ ಭಾಷೆಯವರೂ ಕಡ್ಡಾಯವಾಗಿ ಇಂಗ್ಲಿಷ್ ಪಠ್ಯ ಓದುತ್ತಾರೆ. ಕನ್ನಡಕ್ಕೆ ಆ ‘ಭಾಗ್ಯ’ ಇಲ್ಲ. ಬೇರೆ ಭಾಷೆಯವರೆಗಿಂತ ಕನ್ನಡ ವ್ಯಾಸಂಗಿಗಳು ಸಹಜವಾಗಿಯೇ ಹೆಚ್ಚು ಎಂಬುದು ನಿಜವಾದರೂ ಎಲ್ಲ ವಿ.ವಿಗಳಲ್ಲೂ ‘ಸಮಾನ ನೀತಿ’ ಇಲ್ಲ. ಕರ್ನಾಟಕ ಮತ್ತು ರಾಣಿ ಚನ್ನಮ್ಮ ವಿ.ವಿಗಳಲ್ಲಿ ಬಿ.ಎ.ಗೆ ಮೂರು ವರ್ಷ, ಬಿ.ಎಸ್.ಸಿ.ಗೆ ಎರಡು ವರ್ಷ, ಬಿ.ಕಾಂ; ಬಿ.ಬಿ.ಎಂ; ಬಿ.ಸಿ.ಎ;ಗಳಿಗೆ ಒಂದೇ ವರ್ಷ ಕನ್ನಡ ಪಠ್ಯವಿದೆ. ಮೈಸೂರು ಮತ್ತು ಬೆಂಗಳೂರು ಮತ್ತು ಗುಲ್ಬರ್ಗ ವಿ.ವಿಗಳಲ್ಲಿ ಬಿ.ಎ; ಬಿ.ಎಸ್.ಸಿ; ಬಿ.ಕಾಂ.ಗೆ ಎರಡು ವರ್ಷ, ಬಿ.ಬಿ.ಎಂ; ಬಿ.ಸಿ.ಎ.ಗೆ ಒಂದು ವರ್ಷದ ಕನ್ನಡವಿದೆ.
ಕುವೆಂಪು ವಿ.ವಿದಲ್ಲಿಯೂ ಇದೇ ಮಾದರಿಯಿದೆ. ಮಹಿಳಾ ವಿ.ವಿಯ ವ್ಯಾಪ್ತಿಗೆ ಬರುವ ರಾಜ್ಯದ ಕಾಲೇಜುಗಳು ತಾವು ಅಸ್ತಿತ್ವದಲ್ಲಿರುವ ಪ್ರದೇಶದ ವಿ.ವಿಗಳ ಭಾಷಾ ನೀತಿಯನ್ನು ಅನುಸರಿಸುತ್ತಿವೆ; ನಿರ್ದಿಷ್ಟ ನೀತಿ ಇಲ್ಲ. ಇನ್ನು ಐಚ್ಛಿಕ ಕನ್ನಡದ ಬೋಧನಾವಧಿಯು ಪ್ರತಿ ವಿ.ವಿಗೂ ವಿಭಿನ್ನವಾಗಿದೆ. ಕೆಲವು ಕಡೆ ಹೆಚ್ಚು ಅವಧಿ, ಇನ್ನು ಕೆಲವೆಡೆ ಕಡಿಮೆ ಅವಧಿ. ಕರ್ನಾಟಕ ವಿ.ವಿಯಲ್ಲಿ ‘ಕ್ರಿಯಾತ್ಮಕ ಕನ್ನಡ’ ಪಠ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.
ಉಳಿದ ವಿ.ವಿಗಳಲ್ಲಿ ಇಲ್ಲ. ಇದು ಸರ್ಕಾರದ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ಬರುವ ಕಾಲೇಜು ಶಿಕ್ಷಣದಲ್ಲಿರುವ ಕನ್ನಡದ ಸ್ಥಿತಿಯಾದರೆ, ಸ್ವಾಯತ್ತ ಕಾಲೇಜುಗಳು ಮತ್ತು ಡೀಮ್ಡ್ ವಿ.ವಿಗಳಲ್ಲಿ ಈ ಪರಿಸ್ಥಿತಿಯೂ ಇಲ್ಲ. ತಮಗೆ ಬೇಕಾದಂತೆ ಪಠ್ಯ ಕ್ರಮ ರೂಪಿಸಿ, ತಾವೇ ಪರೀಕ್ಷೆ ನಡೆಸಿ, ತಾವೇ ಮೌಲ್ಯಮಾಪನ ಮಾಡಿ ಅಂಕಪಟ್ಟಿಯನ್ನು ಮಾತ್ರ ಸರ್ಕಾರಿ ವಿ.ವಿಗಳಿಂದ ಪಡೆಯುವ ಸ್ವಾಯತ್ತ ಕಾಲೇಜುಗಳು ಮತ್ತು ಎಲ್ಲವನ್ನೂ ತಮ್ಮ ಅಧಿಕಾರ ವ್ಯಾಪ್ತಿಗೆ ತಂದುಕೊಂಡಿರುವ ಡೀಮ್ಡ್ ವಿ.ವಿಗಳು ಕನ್ನಡಕ್ಕೆ ಸೂಕ್ತ ಸ್ಥಾನ ಕೊಡುತ್ತವೆಯೆಂಬ ನಂಬಿಕೆಯಿಲ್ಲ.
ಸರ್ಕಾರಿ ವಿ.ವಿಗಳಲ್ಲೇ ಕನ್ನಡ ಮತ್ತು ಭಾಷಾ ಬೋಧನೆಗೆ ನಿಖರವಾದ ಒಂದು ನೀತಿಯಿಲ್ಲದಿರುವಾಗ ಇವರನ್ನು ಕೇಳುವವರಾರು?
ಆದ್ದರಿಂದ ಅನೇಕ ಸ್ವಾಯತ್ತ ಕಾಲೇಜುಗಳು ಮತ್ತು ಡೀಮ್ಡ್ ವಿ.ವಿಗಳಲ್ಲಿ ಕನ್ನಡ ಬೋಧನೆ ಒಂದು ವರ್ಷಕ್ಕೆ ಸೀಮಿತಗೊಂಡ ಉದಾಹರಣೆಗಳಿವೆ. ಅವರಿಗೆ ಆ ಸ್ವಾತಂತ್ರ್ಯವನ್ನು ನಮ್ಮ ಶಿಕ್ಷಣ ನೀತಿಯು ಉದಾರವಾಗಿ ದಯಪಾಲಿಸಿದೆ. ಏಕೆಂದರೆ ಇದು ಆರ್ಥಿಕ ಉದಾರೀಕರಣದ ಕಾಲ!
ಸಾಮಾನ್ಯ ಶಿಕ್ಷಣದ ಕೋರ್ಸುಗಳಲ್ಲಿಯೇ ಈ ಸ್ಥಿತಿಯಿರುವಾಗ ಪದವಿ ಹಂತದ ಇನ್ನಿತರ ವಿಶೇಷ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಉದಾಹರಣೆಗೆ ಪಿ.ಯು.ಸಿ. ನಂತರದ ಪದವಿ ಕೋರ್ಸ್ ಆಗಿರುವ ಎಲ್.ಎಲ್.ಬಿ. ಯಲ್ಲಿ ಕನ್ನಡ ಬೋಧನೆಯಲ್ಲಿ ಉಳಿದ ಪದವಿ ಕೋರ್ಸುಗಳಿಗೆ ಕನ್ನಡ ಪಠ್ಯ ಇರಬಹುದಾದರೆ ಈ ಕೋರ್ಸ್‌ಗೆ ಯಾಕೆ ಬೇಡ?
ಇನ್ನು ವೃತ್ತಿ ಶಿಕ್ಷಣದ ವಿಷಯ: ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ವೃತ್ತಿಶಿಕ್ಷಣದ ಪದವಿ ತರಗತಿಗಳಲ್ಲಿ ಅಂದರೆ– ಬಿ.ಇ., ಎಂ.ಬಿ.ಬಿ.ಎಸ್., ದಂತ ವೈದ್ಯಕೀಯ, ನರ್ಸಿಂಗ್ ಕಾಲೇಜುಗಳಲ್ಲಿ ಕಡೇ ಪಕ್ಷ ಮೊದಲ ಎರಡು ಸೆಮಿಸ್ಟರ್‌ಗಳಲ್ಲಿ ಕನ್ನಡ ಪಠ್ಯವನ್ನು ಅಳವಡಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿ ಒತ್ತಾಯಿಸಿದೆ. ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ
ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಕುಲಪತಿಗಳ ಸಭೆ ನಡೆಸಿದೆ.
ನನ್ನ ಸಲಹೆಯನ್ನು ಅಳವಡಿಸಿಕೊಳ್ಳಲು ಒಪ್ಪಲಾಯಿತು. ಕನ್ನಡ ಬಲ್ಲ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸಾಂಸ್ಕೃತಿಕ ಪಠ್ಯ, ಕನ್ನಡೇತರ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮೂಲಕ ಕನ್ನಡ ಕಲಿಕೆ – ಇದು ನನ್ನ ಸೂತ್ರವಾಗಿತ್ತು. ವೃತ್ತಿ ಶಿಕ್ಷಣದಲ್ಲಿ ಸಾಂಸ್ಕೃತಿಕ ತಿಳಿವಳಿಕೆಯನ್ನು ಕನ್ನಡದ ಮೂಲಕ ಕೊಡುವುದು ಮತ್ತು ದೈನಂದಿನ ಕೆಲಸಕ್ಕೆ ಬೇಕಾದ ಕನ್ನಡ ಕಲಿಸುವುದು– ಇದು ನನ್ನ ತಾತ್ವಿಕ ತಿರುಳಾಗಿತ್ತು. ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಮತ್ತು ರಾಜೀವ ಗಾಂಧಿ ಆರೋಗ್ಯ ವಿ.ವಿಯ ಸಮಿತಿಗಳ ಒಪ್ಪಿಗೆಯೂ ಸಿಕ್ಕಿತು.
ಕನ್ನಡ ಪಠ್ಯದ ಅಳವಡಿಕೆಯಾಯಿತು. ಆನಂತರ ಇನ್ನೊಂದು ಸಭೆ ಮಾಡಿ ಪರೀಕ್ಷೆಗೆ ಕಡ್ಡಾಯ ಮಾಡುವ ಮಾರ್ಗವನ್ನು ಚರ್ಚಿಸಿ ‘ಆಂತರಿಕ ಮೌಲ್ಯ-ಮಾಪನ’ ಭಾಗದಲ್ಲಿ ಒಂದು ಸೆಮಿಸ್ಟರ್‌ಗೆ 50 ಅಂಕಗಳನ್ನು ಕಾದಿರಿಸಲು ಒಪ್ಪಲಾಯಿತಾದರೂ ಮುಂದೆ ಅದು ಅನುಷ್ಠಾನಗೊಳ್ಳಲಿಲ್ಲ. ಈಗ ಕನ್ನಡ ಪಠ್ಯವನ್ನು ಅಳವಡಿಸಿಕೊಂಡವರೂ ಕೈ ಬಿಟ್ಟಿದ್ದು ಬೆರಳೆಣಿಕೆಯ ತಾಂತ್ರಿಕ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ಮಾತ್ರ ಬೋಧಿಸಲಾಗುತ್ತದೆ. ಕನ್ನಡದ ಬಗ್ಗೆ ದೊಡ್ಡಮಾತಾಡುವ ಯಾರೂ ಈ ಕಡೆ ಗಮನ ಕೊಡದೆ ಹೋದದ್ದರ ರಹಸ್ಯವೇನೋ ಗೊತ್ತಿಲ್ಲ!
ಸಾಮಾನ್ಯ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಪದವಿಗಳಲ್ಲಿ ಕನ್ನಡದ ಪಠ್ಯಗಳನ್ನು ವಿಸ್ತರಿಸಬೇಕಾಗಿರುವ ಇಂದಿನ ಸನ್ನಿವೇಶದಲ್ಲಿ ನಮ್ಮ ಸರ್ಕಾರ ಇನ್ನೊಂದು ಆಘಾತ ನೀಡಿದೆ. ಪ್ರೊ.ಚಿದಾನಂದಗೌಡ ಸಮಿತಿಯು ಪರೀಕ್ಷಾ ಸುಧಾರಣೆಯ ಬಗ್ಗೆ ಸಲ್ಲಿಸಿರುವ 12 ಶಿಫಾರಸುಗಳನ್ನು ಒಪ್ಪಿ ಸರ್ಕಾರವು ದಿನಾಂಕ 2014ರ ಆಗಸ್ಟ್ 11ರಂದು ಹೊರಡಿಸಿದ ಈ ಆದೇಶದಲ್ಲಿರುವ (ಆದೇಶ ಸಂಖ್ಯೆ: ಇಡಿ 365 ಯು. ಎನ್.ಇ. 2014) 12ನೇ ಅಂಶವು ಬಿ.ಬಿ.ಎ.; ಬಿ.ಬಿ.ಎಂ.; ಬಿ.ಸಿ.ಎ.; ಬಿ.ಕಾಂ, ಪದವಿಗಳಲ್ಲಿ ಭಾಷಾ ಬೋಧನಾ ಪಠ್ಯಗಳ ಅವಧಿಯಲ್ಲಿ ಎರಡು ಸೆಮಿಸ್ಟರ್‌ಗಳಿಗೆ ಸೀಮಿತಗೊಳಿಸಲಾಗಿದೆ.
ಅಂದರೆ ಒಂದು ವರ್ಷ ಮಾತ್ರ ಕನ್ನಡ, ಇಂಗ್ಲಿಷ್ ಭಾಷಾ ಸಾಹಿತ್ಯ ಪಠ್ಯಗಳು ಇರುತ್ತವೆ. ಬಿ.ಎ.; ಬಿ.ಎಸ್.ಸಿ.ಗೆ ಮಾತ್ರ ಎರಡು ವರ್ಷ ಇರುತ್ತವೆ. ವಾಸ್ತವವಾಗಿ ವಾಣಿಜ್ಯ ವಿಷಯ ಓದುವವರಿಗೆ ಸಾಹಿತ್ಯಕ– ಸಾಂಸ್ಕೃತಿಕ ತಿಳಿವಳಿಕೆಯ ಅಗತ್ಯ ಹೆಚ್ಚು ಇರುತ್ತದೆ. ವಾಣಿಜ್ಯ ಹಾಗೂ ವೃತ್ತಿ ಶಿಕ್ಷಣದ ವಿಷಯಗಳು ಮುಕ್ತ ಆರ್ಥಿಕತೆಯ ಫಲವಾದ ಮಾರುಕಟ್ಟೆಯ ಅಗತ್ಯಗಳಿಂದ ನಿಯಂತ್ರಿತವಾಗುತ್ತಿರುವುರಿಂದ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ವಿಷಯಗಳು ನಿರ್ಲಕ್ಷಿಸಲ್ಪಡುತ್ತಿದೆ.
ಸಂವೇದನಾ ಕೇಂದ್ರಿತ ವಿಷಯಗಳ ಅಗತ್ಯವಿಲ್ಲವೆನ್ನುವ ಮುಕ್ತ ಮಾರುಕಟ್ಟೆ ನೀತಿಯು ಶಿಕ್ಷಣ ಕ್ಷೇತ್ರದಲ್ಲೂ ವ್ಯಾಪಿಸುತ್ತಿದೆ. ಇಂತಹ ಒಂದು ಫಲಿತವೇ ಈ ಸರ್ಕಾರಿ ಆದೇಶ. ಇದು ಅನುಷ್ಠಾನಗೊಂಡಾಗ ಎಲ್ಲ ವಿಶ್ವವಿದ್ಯಾಲಯಗಳೂ ಇದನ್ನೇ ಅನುಸರಿಸಬೇಕಾಗುತ್ತದೆ. ಕನ್ನಡಕ್ಕೆ ಮಾತ್ರವಲ್ಲ ಕಡ್ಡಾಯ ಇಂಗ್ಲಿಷ್‌ಗೂ ಧಕ್ಕೆಯಾಗುತ್ತದೆ. ಬಿ.ಎ.; ಬಿ.ಎಸ್.ಸಿ. ಪದವಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಮತಷ್ಟು ಆತಂಕಕ್ಕೆ ಕಾರಣವಾಗುತ್ತದೆ.
ಮಾಹಿತಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆಯನ್ನು ನೀಡುತ್ತೇನೆ: ಬಿ.ಎ. ತರಗತಿಯ ಮೊದಲ ಸೆಮಿಸ್ಟರ್‌ಗೆ 12,108 ಜನರು ಸೇರಿದ್ದರೆ, ಬಿ.ಕಾಂ.ಗೆ 40,461 ಜನ ಸೇರಿದ್ದಾರೆ; ಬಿ.ಎಸ್.ಸಿ. ಮೊದಲ ಸೆಮಿಸ್ಟರ್‌ಗೆ 5780 ಜನ ಸೇರಿದ್ದರೆ ಬಿ.ಬಿ.ಎಂ.ಗೆ 8199 ಜನರು ಸೇರಿದ್ದಾರೆ. ಕೊನೆಯ ವರ್ಷದ ಬಿ.ಎ.ಯಲ್ಲಿ 19,255 ಜನ, ಬಿ.ಕಾಂ.ನಲ್ಲಿ 43,380 ಜನರಿದ್ದಾರೆ.
ಬಿ.ಎಸ್.ಸಿ.ಯಲ್ಲಿ 7,996 ಜನ, ಬಿ.ಬಿ.ಎಂ. ನಲ್ಲಿ 13,119 ಜನರಿದ್ದಾರೆ. ಈ ಸಂಖ್ಯಾ ಪ್ರಮಾಣವು ಇತರ ವಿ.ವಿಗಳಿಗೂ ಅನ್ವಯವಾಗಬಹುದಾಗಿದ್ದು, ಒಟ್ಟಾರೆ ವಾಣಿಜ್ಯ ವಿಷಯಗಳತ್ತ ಹೆಚ್ಚು ವಿದ್ಯಾರ್ಥಿಗಳು ಧಾವಿಸುತ್ತಿರುವುದು ಸ್ಪಷ್ಟ. ಹೆಚ್ಚು ವಿದ್ಯಾರ್ಥಿಗಳಿರುವ ಕೋರ್ಸ್‌ಗಳಲ್ಲೇ ಭಾಷಾ ಸಾಹಿತ್ಯ ವಿಷಯಕ್ಕೆ ಧಕ್ಕೆ ತಂದರೆ, ಇದು ಭಾಷೆಗೂ ಹಿನ್ನಡೆ, ಸಾಂಸ್ಕೃತಿಕ ಅರಿವಿಗೂ ಹಿನ್ನಡೆ; ಜೊತೆಗೆ ಅಧ್ಯಾಪಕರ ನೇಮಕಾತಿಗೆ ಕತ್ತರಿ!
ಈಗಾಗಲೇ ಕೆಲಸದಲ್ಲಿರುವವರಿಗೂ ಎರಡು ಮೂರು ಕಡೆ ಬೋಧಿಸಬೇಕಾದ ಅನಿವಾರ್ಯತೆ ಬರಬಹುದು. ವಸ್ತುಸ್ಥಿತಿ ಹೀಗಿರುವಾಗ ಸರ್ಕಾರದ 2014ರ ಆಗಸ್ಟ್ 11ರ ಆದೇಶವು ಕನ್ನಡ, ಇಂಗ್ಲಿಷ್ ಮತ್ತು ಪದವಿ ತರಗತಿಗಳ ಇತರೆ ಭಾರತೀಯ ಭಾಷಾ– ಸಾಹಿತ್ಯ ಕಲಿಕೆಗೆ ಸಾಕಷ್ಟು ಕತ್ತರಿ ಹಾಕುತ್ತದೆ; ಭಾಷೆ, ಸಾಹಿತ್ಯ ಕಲಿಕೆಯ ಮಹತ್ವವನ್ನು ಕುಂಠಿತಗೊಳಿಸುತ್ತದೆ. ಸರ್ಕಾರವು ಈ ಆದೇಶವನ್ನು ವಾಪಸ್ ಪಡೆಯಬೇಕು. ಭಾಷಾ ಅಧ್ಯಾಪಕರ ಸಂಘಗಳು ಈ ಬಗ್ಗೆ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಿದ್ಧವಾಗಬೇಕು.
ಉನ್ನತ ಶಿಕ್ಷಣದ ಎಲ್ಲ ಪದವಿ ತರಗತಿಗಳಲ್ಲಿ ಅಂದರೆ, ಬಿ.ಎ.; ಬಿ.ಎಸ್.ಸಿ.; ಬಿ.ಕಾಂ.; ಬಿ.ಬಿ.ಎಂ.; ಬಿ.ಸಿ.ಎ.; ಎಲ್.ಎಲ್.ಬಿ.ಗಳಲ್ಲದೆ ವೃತ್ತಿ ಶಿಕ್ಷಣದ ಬಿ.ಇ.; ಎಂ.ಬಿ.ಬಿ.ಎಸ್.; ದಂತ ವೈದ್ಯಕೀಯ, ನರ್ಸಿಂಗ್ ಮುಂತಾದ ಎಲ್ಲಾ ಕೋರ್ಸ್‌ಗಳ ಮೊದಲ ಎರಡು ವರ್ಷವಾದರೂ ಕನ್ನಡ ಭಾಷೆ, ಸಾಹಿತ್ಯ ಬೋಧನೆ ಕಡ್ಡಾಯವಾಗಬೇಕು. ಆಗ ಇಂಗ್ಲಿಷ್ ಜೊತೆಗೆ ಇತರೆ ಭಾರತೀಯ ಭಾಷೆ ಸಾಹಿತ್ಯ (ಉರ್ದು, ಹಿಂದಿ ಇತ್ಯಾದಿ) ಬೋಧನೆಯೂ ಈ ಭಾಷೆ ಸಾಹಿತ್ಯ ಪಠ್ಯಕ್ರಮದ ಭಾಗವಾಗುತ್ತದೆ.
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮ ಅನುಷ್ಠಾನಕ್ಕೆ ಕೊಡುವಷ್ಟೇ ಗಮನವನ್ನು ಕಾಲೇಜು ಶಿಕ್ಷಣದಲ್ಲಿ ಕನ್ನಡವನ್ನು– ಭಾಷೆ ಸಾಹಿತ್ಯ ವಿಷಯವನ್ನು – ಪರಿಪೂರ್ಣವಾಗಿ ಅಳವಡಿಸುವ ಅಗತ್ಯ ಮನಗಾಣಬೇಕು. ಈ ಬಗ್ಗೆ ರಾಜ್ಯದ ಅಂತರ ವಿ.ವಿ. ಮಂಡಳಿಯು (ಐ.ಯು.ಬಿ.) ನಿಖರ ನಿರ್ಧಾರ ಕೈಗೊಂಡು ಕಡೇಪಕ್ಷ ಎರಡು ವರ್ಷಗಳ ಪದವಿ ತರಗತಿಗಳಿಗೆ ಭಾಷೆ, ಸಾಹಿತ್ಯ ಬೋಧನೆಯನ್ನು ಕಡ್ಡಾಯ ಮಾಡಬೇಕು.
ಬರಗೂರು ರಾಮಚಂದ್ರಪ್ಪ
ಕ್ರಪೆ: ಪ್ರಜಾವಾಣಿ, ಡಿಸೆಂಬರ್ 26 , 2014