ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಶಾರೀರಿಕ ನಿರ್ಧೇಶಕರಾದ ಶ್ರೀ ಪುರುಷೋತ್ತಮ ಪೂಜಾರಿ ಯವರು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ದೈಹಿಕ ಶಿಕ್ಷಣ ನಿರ್ಧೇಶಕರ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಶಾರೀರಿಕ ನಿರ್ಧೇಶಕರಾಗಿ ಕಾರ್ಯವೆಸಗುತ್ತಿರುವ ಇವರು ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರು ಹಾಗು ದ ಕ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿಯೂ ಆಗಿರುತ್ತಾರೆ. ಕಳೆದ ಮೂರು ದಶಕಗಳಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳನ್ನು ತರಬೇತುಗೊಳಿಸಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತಂದಿರುವ ಇವರು ಒಲಿಂಪಿಯನ್ ಸಹನಾ ಕುಮಾರಿ, ಅರ್ಜುನ ಪ್ರಶಸ್ತಿ ವಿಜೇತ ಭಾರತ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹೆರಾಲ್ಡ್ ಪಾಯಸ್, ಹರ್ಷಿಣಿ ಕುಮಾರಿ, ಶ್ರೀಮಾ ಪ್ರಿಯದರ್ಶಿನಿ, ಏಷ್ಯನ್ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ವಿಜೇತೆ ದೀಪಾ ಕುಲಾಲ್, ಬೆಳ್ಳಿ ಗೆದ್ದ ಅಮಿತಾ ಪೂಜಾರಿ ಮುಂತಾದವರಿಗೆ ತರಬೇತು ನೀಡಿ ಅವರ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತಂದವರಾಗಿದ್ದಾರೆ.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಶ್ರೀ ಇಲ್ಯಾಸ್ ಪಿಂಟೋ ಕಾರ್ಯದರ್ಶಿಯಾಗಿಯೂ, ಕಟೀಲು ಎಸ್ ಡಿ ಪಿ ಟಿ ಕಾಲೇಜಿನ ಶ್ರೀ ಜಯರಾಂ ರೈ ಕೋಶಾಧಿಕಾರಿಯಾಗಿಯೂ ಆಯ್ಕೆಯಾಗಿದ್ದಾರೆ.