- ದೇವರಾಜ್. ಎಲ್
ಬೆಂಗಳೂರು: 'ಡಿವಿಜಿ ಬೆಂಗಳೂರು ವಿಶ್ವವಿದ್ಯಾಲಯ- ಜ್ಞಾನವಾಹಿನಿ' ಸ್ಥಾಪನೆಗೆ ಒಂದೆಡೆ ರಾಜ್ಯಪಾಲರ ಅಪಸ್ವರ ಕೇಳಿ ಬರುತ್ತಿದ್ದರೆ, ಮತ್ತೊಂದೆಡೆ ವಿವಿ ನಿರ್ಮಾಣ ಅವಶ್ಯ ಎಂದು ಕೆಲವು ವಿಶ್ರಾಂತ ಕುಲಪತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ರಾಂತ ಕುಲಪತಿ ಪ್ರೊ.ಎನ್.ಆರ್.ಶೆಟ್ಟಿ, ಎಂ.ಎಸ್.ತಿಮ್ಮಪ್ಪ, ರುದ್ರಯ್ಯ ಮತ್ತಿತರರು ನೂತನ ವಿವಿ ಸ್ಥಾಪನೆಯ ಅವಶ್ಯವಿದ್ದು, ಕೆಲವು ವ್ಯಕ್ತಿಗಳು ಅಪಸ್ವರ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನೂತನ ವಿವಿ ಸ್ಥಾಪಿಸುವುದರಿಂದ ಬೆಂಗಳೂರು ವಿವಿ ಆಡಳಿತ ಮಾತ್ರವಲ್ಲದೆ, ಪರೀಕ್ಷಾ ವಿಭಾಗದಲ್ಲೂ ಸುಧಾರಣೆ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ.
ಡಿವಿಜಿ ಜ್ಞಾನವಾಹಿನಿ ವಿಶೇಷಾಧಿಕಾರಿ ಡಾ.ಕೆ.ಆರ್.ವೇಣುಗೋಪಾಲ್ ಈ ಹಿಂದೆ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿರುವ 57 ಪುಟಗಳ ವರದಿ ಪ್ರಕಾರ ವಿವಿ ನಿರ್ಮಾಣಕ್ಕೆ ಅಂದಾಜು 190.36 ಕೋಟಿಗಿಂತ ಹೆಚ್ಚಿನ ವೆಚ್ಚ ತಗಲುವುದಿಲ್ಲ ಎಂದು ಪ್ರಸ್ತಾಪಿಸಿದ್ದಾರೆ.
ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ(ಯುಜಿಸಿ) ನಿಯಮಾವಳಿ ಪ್ರಕಾರ ಪ್ರತಿ ವಿವಿಗೆ 100ಕ್ಕಿಂತ ಹೆಚ್ಚಿನ ಕಾಲೇಜುಗಳು ಇರಬಾರದು ಎಂದಿದೆ.
ವಲಯವಾರು ವಿಗಂಡಣೆ: ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ಕನಕಪುರ, ಚನ್ನಪಟ್ಟಣ, ಕೋಲಾರ ಈ ವ್ಯಾಪ್ತಿಯಲ್ಲಿರುವ 683 ಕಾಲೇಜುಗಳಲ್ಲಿ ಜ್ಞಾನವಾಹಿನಿಗೆ 316 ಮತ್ತು ಜ್ಞಾನಜ್ಯೋತಿಗೆ 367 ಕಾಲೇಜು ಸೇರಲಿದೆ.
ವರದಿಯಲ್ಲಿ ಜ್ಞಾನವಾಹಿನಿ ಸ್ಥಾಪನೆ ಬಗ್ಗೆ ವಿಶ್ರಾಂತ ಕುಲಪತಿಗಳಾದ ರುದ್ರಯ್ಯ ಸೇರಿದಂತೆ ಉನ್ನತ ಶಿಕ್ಷಣ ಪರಿಷತ್ತು ತಯಾರಿಸಿದ ವರದಿಗಳನ್ನು ಒಳಗೊಂಡಿದೆ. ಕಾಲೇಜುಗಳು ಸಂಪೂರ್ಣ ವಿವರ ಒಳಗೊಂಡಿದ್ದು, ನೂತನ ವಿವಿ ಸ್ಥಾಪನೆಗೆ ಬೇಕಾದ ಮೂಲ ಸೌಕರ್ಯ ಮತ್ತು ಅದರ ಖರ್ಚು-ವೆಚ್ಟದ ಬಗ್ಗೆ ಅಂದಾಜು ಪಟ್ಟಿ ನೀಡಿದೆ.
ಸೆಂಟ್ರಲ್ ಕಾಲೇಜು ಇಬ್ಭಾಗ ಬೇಡ: ಬೆಂಗಳೂರು ವಿಶ್ವವಿದ್ಯಾಲಯ ಇತಿಹಾಸ ಸಾರುವ ಸೆಂಟ್ರಲ್ ಕಾಲೇಜು ಇಬ್ಭಾಗ ಮಾಡುವ ಅಗತ್ಯ ಇಲ್ಲ. ನೂತನ ವಿವಿ ಸ್ಥಾಪಿಸಲು ಸೆಂಟ್ರಲ್ ಕಾಲೇಜು ಆಡಳಿತ ಕಚೇರಿಯಾಗಿ ಮಾಡಿಕೊಳ್ಳುವ ಬದಲು, ತುಮಕೂರು ವಿವಿ ಸ್ಥಾಪಿಸುವ ಮೊದಲು ಒಂದು ಸರ್ಕಾರಿ ಕಾಲೇಜಿನಲ್ಲಿ ಪ್ರಾರಂಭಿಸಿ ಆನಂತರ ಮೂಲಸೌಕರ್ಯ ಪಡೆದುಕೊಂಡಿತು. ಈ ರೀತಿಯಲ್ಲಿ ನೂತನ ಜ್ಞಾನವಾಹಿನಿ ಮಾಡುವುದು ಸಹ ಮುಖ್ಯ ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್.ತಿಮ್ಮಪ್ಪ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ರಾಜಕೀಯ ಬೇಡ: ನೂತನ ವಿವಿ ಸ್ಥಾಪನೆ ವಿಚಾರ ಬೆಂಗಳೂರು ವಿವಿ ಕುಲಪತಿಯಾಗಿದ್ದ ಎನ್.ಆರ್. ಶೆಟ್ಟಿ ಅವರ ಕಾಲದಲ್ಲಿ ಅಂದರೆ 1985ರಲ್ಲಿ ಅಕಾಡೆಮಿಕ್ ಸಭೆಯಲ್ಲಿ ಚರ್ಚೆಯಾಗಿತ್ತು. ಅಂದೇ, ವಿಭಜನೆ ಕುರಿತು ಚರ್ಚಿಯಾಗಿದ್ದರಿಂದ ಕೇವಲ ಬಿಜೆಪಿ ಸರ್ಕಾರ ಬಂದು ನೂತನ ವಿವಿ ಸ್ಥಾಪಿಸಲು ಮುಂದಾಯಿತು ಎಂದು ಕೆಲವುರು ಮಾತನಾಡುವುದು ಅರ್ಥವಿಲ್ಲ.
ವಿವಿಯ ಲಕ್ಷೋಪ ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇರುವುದು ಕೇವಲ ಒಂದು ತಿಂಗಳ ಕಾಲಾವಕಾಶ. ನೂತನ ವಿವಿ ಸ್ಥಾಪನೆಯಿಂದ ಕಾಲೇಜು ಹಂಚಿಕೆಯಾಗಿ ಕಡಿಮೆ ಉತ್ತರ ಪತ್ರಿಕೆಗಳು ಮೌಲ್ಯಮಾಪನಕ್ಕೆ ಸಮಯ ದೊರೆಯಲಿದೆ. ಇದರಿಂದ ಫಲಿತಾಂಶ ಕೂಡ ಬೇಗ ಪ್ರಕಟವಾಗಲಿದೆ ಎಂದು ತಿಮ್ಮಪ್ಪ ಅವರು ಹೇಳಿದ್ದಾರೆ.
4ನೇ ವಿವಿ ಸ್ಥಾಪನೆ?
ಜ್ಞಾನಜ್ಯೋತಿ(ಸೆಂಟ್ರಲ್ ಕಾಲೇಜು), ಜ್ಞಾನಭಾರತಿ(ವಿವಿ ಕೇಂದ್ರ ಕಚೇರಿ), ಜ್ಞಾನವಾಹಿನಿ(ಹೊಸಕೋಟೆ) ಜ್ಞಾನ...? ಏನು ನಾಲ್ಕನೇ ವಿವಿ ಸ್ಥಾಪನೆಯಾಗಲಿದೆಯೇ? ಎಂದು ಆಶ್ಚರ್ಯಪಡಬೇಡಿ. ಮುಂದಿನ 15-20 ವರ್ಷಗಳ ನಂತರ ಬೆಂಗಳೂರು ಉತ್ತರ ವಿಭಾಗದಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಾಗುವುದರಿಂದ ಕೋಲಾರದಲ್ಲೊಂದು ವಿವಿ ಸ್ಥಾಪನೆಯ ಬಗ್ಗೆ ಈಗಾಗಲೇ ಕೆಲವು ಅಧಿಕಾರಿಗಳು ಚರ್ಚೆ ಮಾಡಿದ್ದು, ಸದ್ಯದಲ್ಲೆ 'ವಿಷನ್' ಹೆಸರಿನಲ್ಲಿ ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯಲ್ಲಿ ಇದನ್ನು ಪ್ರಸ್ತಾಪಿಸಲಿದ್ದಾರೆ. ಜ್ಞಾನವಾಹಿನಿಗೆ ಸೇರಲಿರುವ ಬೋಧಕರು ಮತ್ತು ಬೋಧಕೇತರರಿಗೆ ವೇತನಕ್ಕಾಗಿ 33.61 ಕೋಟಿ ಮತ್ತು ವಿವಿಗೆ ಸ್ಥಳ ಸೇರಿದಂತೆ ಕುಲಪತಿ ಕಚೇರಿ, ಮೂಲ ಸೌಕರ್ಯಕ್ಕಾಗಿ 156.75ಕೋಟಿ ಅವಶ್ಯವಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ನೂತನ ವಿವಿ ಅವಶ್ಯವಿದೆ
ನೂತನ ವಿವಿ ಅವಶ್ಯವಿದೆ. ಕೆಲವರು ವಿವಿ ಬಗ್ಗೆ ಅಪಸ್ವರ ಎತ್ತುತ್ತಿರುವುದು ನನ್ನ ಮನಸ್ಸಿಗೆ ಬೇಸರ ಉಂಟುಮಾಡಿದೆ.
- ಎನ್.ಆರ್.ಶೆಟ್ಟಿ, ವಿಶ್ರಾಂತ ಕುಲಪತಿ
Courtesy: Kannada Prabha, June21, 2013