ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ಸದಸ್ಯರ ಸದಸ್ಯತ್ವ ಹಿಂಪಡೆದುಕೊಂಡ ಸರ್ಕಾರ ಇದೀಗ ಕುಲಸಚಿವರ ಬದಲಾವಣೆಗೆ ಮುಂದಾಗಿದೆ. ಕುಲಸಚಿವರ ಹುದ್ದೆಗೆ ಹಿರಿಯ ಪ್ರೊಫೆಸರ್‌ಗಳನ್ನು ನೇಮಕ ಮಾಡಲು ಸರ್ಕಾರ ಚಿಂತಿಸಿದ್ದು, 10 ಹಿರಿಯ ಪ್ರೊಫೆಸರ್‌ಗಳ ಪಟ್ಟಿ ಕಳುಹಿಸಿಕೊಡುವಂತೆ ಉನ್ನತ ಶಿಕ್ಷಣ ಇಲಾಖೆ ಕುಲಪತಿಗಳಿಗೆ ಸುತ್ತೋಲೆ ಹೊರಡಿಸಿದೆ. ಜತೆಗೆ ಪ್ರೊಫೆಸರ್‌ಗಳಿಗೆ ಉತ್ತಮ ಆಡಳಿತ ಮತ್ತು ಪರೀಕ್ಷಾ ವಿಷಯದಲ್ಲಿ ಸುಧಾರಣೆ ತರುವಂತಹ ಸಾಮರ್ಥ್ಯವಿರಬೇಕು ಎಂದು ಸೂತ್ತೋಲೆಯಲ್ಲಿ ಸೂಚಿಸಿದೆ. ಅಷ್ಟೇ ಅಲ್ಲದೆ, ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ರಾಜಕೀಯ ಹಿನ್ನೆಲೆ ಬೇಡ: ಕುಲಸಚಿವರ ಹುದ್ದೆಗೆ ರಾಜಕೀಯ ಹಿನ್ನೆಲೆ ಹೊಂದಿರದ ವ್ಯಕ್ತಿಗಳನ್ನು ಆಯ್ಕೆಮಾಡಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಕುಲಸಚಿವರ ಬದಲಾವಣೆ ಮುಖ್ಯ ಉದ್ದೇಶ ವಿಶ್ವವಿದ್ಯಾಲಯಗಳಲ್ಲಿ ಪಾರದರ್ಶಕ ಆಡಳಿತ ಮತ್ತು ಪರೀಕ್ಷಾ ವಿಧಾನದಲ್ಲಿ ಸುಧಾರಣೆ ತರುವುದಾಗಿದೆ. ಹೀಗಾಗಿ ರಾಜಕೀಯ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ಅವಶ್ಯ ಇಲ್ಲ. ಬದಲಾಗಿ ಉತ್ತಮ ಆಡಳಿತಗಾರರ ಅವಶ್ಯವಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.
ಇದುವರೆಗೂ ಬಂದಿಲ್ಲ: ಈ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಅವರನ್ನು ಸಂಪರ್ಕಿಸಿದಾಗ, ಇದುವರೆಗೂ ನನಗೆ ಸುತ್ತೋಲೆ ಬಂದಿಲ್ಲ. ಅಲ್ಲದೆ, ಉನ್ನತ ಶಿಕ್ಷಣ ಇಲಾಖೆ ತಮ್ಮನ್ನು ಈ ವಿಚಾರದಲ್ಲಿ ಸಂಪರ್ಕಿಸಿಲ್ಲ. ಬಹುಶಃ ಬುಧವಾರ ಬೆಳಗ್ಗೆ ನನಗೆ ಸುತ್ತೋಲೆ ಸಿಗಬಹುದು ಎಂದರು. ಕುಲಸಚಿವರ ಆಯ್ಕೆ ಮಾಡುವ ಸಂದರ್ಭದಲ್ಲಿ ಕುಲಪತಿಗಳಿಂದ ಪ್ರೊಫೆಸರ್‌ಗಳ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದು ಆ ಮಾಹಿತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಮಣ್ಣಾದ ನಿರ್ಧಾರ: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ಎನ್. ಪ್ರಭುದೇವ್ ಮತ್ತು ಕುಲ ಸಚಿವರಾಗಿದ್ದ ಪ್ರೊ.ಬಿ.ಸಿ. ಮೈಲಾರಪ್ಪ ಅವರ ಒಳಜಗಳದಿಂದ ಬೇಸತ್ತಿದ್ದ ಬೆಂಗಳೂರು ವಿಶ್ವವಿದ್ಯಾಲಯ ನೂತನ ಕುಲಸಚಿವರ ನೇಮಕದಲ್ಲಿ ಕೆಲವು ಬದಲಾವಣೆ ತರಲು ನಿರ್ಧಾರ ಕೈಗೊಂಡಿತ್ತು. ಅಂದಿನ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ. ರವಿ ಅವರು ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ಕುಲಸಚಿವರ ಸ್ಥಾನಕ್ಕೆ ತರಲು ನಿರ್ಧರಿಸಿದ್ದರು. ಆದರೆ, ಸರ್ಕಾರ ಬದಲಾದ ಕಾರಣ ಸಾಧ್ಯವಾಗಲಿಲ್ಲ.
ಬೆಂವಿವಿಗೆ ಸಾಧ್ಯವಿಲ್ಲ ಕುಲಸಚಿವರ ಬದಲಾವಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ಬೆಂಗಳೂರು ವಿವಿಗೆ ಅನ್ವಯಿಸಲು ಕಷ್ಟವಾಗುತ್ತದೆ. ಕಾರಣ, ಪ್ರೊ.ಬಿ.ಸಿ. ಮೈಲಾರಪ್ಪ ಅವರನ್ನು ಹೈಕೋರ್ಟ್ ಕುಲಸಚಿವ ಸ್ಥಾನದಿಂದ ವಜಾಮಾಡಿರುವುದರಿಂದ ಈ ಕೇಸ್ ಸುಪ್ರೀಂರ್ ಕೋರ್ಟ್‌ನಲ್ಲಿದೆ. ಹೀಗಾಗಿ ಕೇಸು ಇತ್ಯರ್ಥವಾಗುವವರೆಗೂ ಕಾಯಂ ಕುಲಸಚಿವರ ನೇಮಕ ಕಾನೂನುಬಾಹಿರ ಆಗುತ್ತದೆ.
ದೇವರಾಜ್ ಎಲ್
Courtesy: KannadaPrabha, June 25, 2013