ಅಜಿತ್ ಪಿಳ್ಳ
ಪದವಿ ಕಾಲೇಜಿಗೆ ಪ್ರವೇಶ ಗಿಟ್ಟಿಸಲು ಪಿಯುಸಿಯಲ್ಲಿ ಶೇ. 95 ಅಥವಾ 98ರಷ್ಟು ಅಂಕ ಗಳಿಸಿರಬೇಕೇ? ಕಳೆದ ಕೆಲ ವಾರಗಳ ಹಿಂದೆ ದಿಲ್ಲಿ ವಿವಿ ಶೇ.90ಕ್ಕಿಂತಲೂ ಹೆಚ್ಚಿನ ಅಂಕ ಪಡೆದವರಿಗಷ್ಟೇ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿತ್ತು. ತಮ್ಮ ಆಯ್ಕೆಯ ಕಾಲೇಜಿಗೆ ಪ್ರವೇಶ ಗಿಟ್ಟಿಸಬೇಕೆಂಬ ಹಂಬಲದಲ್ಲಿ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ನಿರಾಶೆಯಿಂದ ವಾಪಸಾದರು. ಪಿಯುಸಿಯಲ್ಲಿ ಶೇ.94ರಷ್ಟು ಅಂಕ ಗಳಿಸಿದ್ದವರಿಗೂ ವಿವಿ ಕಾಲೇಜುಗಳಲ್ಲಿ ಸೀಟು ಸಿಗಲಿಲ್ಲ. ದೊಡ್ಡ ಕನಸಿನೊಂದಿಗೆ ಮಕ್ಕಳನ್ನು ಕಾಲೇಜಿಗೆ ಸೇರಿಸಲು ಬಂದಿದ್ದ ಪೋಷಕರಂತೂ ಹತಾಶೆಗೆ ಬಿದ್ದರು. ಕೆಲ ವಿದ್ಯಾರ್ಥಿಗಳು ಮಾನಸಿಕ ಕ್ಲೇಶ ಅಂಟಿಸಿಕೊಂಡು ಖಿನ್ನರಾದರು. ಅಪಾರ ಬುದ್ಧಿಮತ್ತೆಯ ವಿದ್ಯಾರ್ಥಿಗಳು ಎರಡು ಕಾಲೇಜುಗಳಲ್ಲಿ ಪ್ರವೇಶಾನುಮತಿ ಗಿಟ್ಟಿಸಿ ತಮ್ಮಿಷ್ಟದ ಸಂಸ್ಥೆಯೊಂದನ್ನು ಆರಿಸಿಕೊಂಡಿದ್ದರು, ಹೀಗಾಗಿ ಉಳಿಕೆಯಾದ ಮತ್ತೊಂದು ಸೀಟನ್ನು ನೆಚ್ಚಿಕೊಳ್ಳಬಹುದಾದ ಅವಕಾಶ ಮಾತ್ರ ಉಳಿದ ವಿದ್ಯಾರ್ಥಿಗಳಿಗೆ ಒದಗಿತ್ತು.
ಕೇಂದ್ರ ಹಾಗೂ ರಾಜ್ಯ ಸರಕಾರಿ ವಿವಿಗಳ ಪ್ರವೇಶಾತಿ ಇಷ್ಟು ಕಷ್ಟವಾಗಿರುವುದರಿಂದಲೇ ಕಳೆದ ಕೆಲ ದಶಕಗಳಿಂದ ದೇಶಾದ್ಯಂತ ಖಾಸಗಿ ಕಾಲೇಜುಗಳು, ವಿವಿಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಇಂಥ ಖಾಸಗಿ ಸಂಸ್ಥೆಗಳಿಗೆ ಪ್ರವೇಶ ಗಿಟ್ಟಿಸುವುದು ಹಾಗೂ ದಾಖಲಾಗುವ ಪ್ರಕ್ರಿಯೆಯೂ ಹಾಲು ಕುಡಿದಷ್ಟೇ ಸುಲಭ. ಆಯಾ ಸಂಸ್ಥೆಗಳ ವೆಬ್‌ಸೈಟ್‌ಗೆ ಭೇಟಿಕೊಟ್ಟು ಒಂದು ಸಂದೇಶ ಹರಿಬಿಟ್ಟರೆ ಅಥವಾ ಜಾಹೀರಾತಿನಲ್ಲಿ ನೀಡಿರುವ ನಂಬರಿಗೆ ಉಚಿತ ಕರೆ ಮಾಡಿ ನಿಮ್ಮ ಹೆಸರು ನೊಂದಾಯಿಸಿಕೊಂಡರಷ್ಟೇ ಸಾಕು, ನಿಮ್ಮ ದಾಖಲಾತಿ ಒಂದು ಹಂತಕ್ಕೆ ಮುಗಿದಂತೆಯೇ ಸರಿ. ಮೊಬೈಲ್ ಫೋನ್‌ಗೆ ಕರೆನ್ಸಿ ಹಾಕಿಸಿದಷ್ಟೇ ಸುಲಭ ಹಾಗೂ ಸುಲಲಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗಕ್ಕೆ ಸೇರುವುದು.
ಇಷ್ಟೆಲ್ಲ ಅನುಕೂಲ ಹಾಗೂ ಸುಲಭದ ದಾರಿಗಳಿದ್ದರೂ ಉತ್ತಮ ಕಾಲೇಜು ಶಿಕ್ಷಣ ಪಡೆದುಕೊಳ್ಳಬೇಕೆಂದು ಹಂಬಲಿಸುವವರು ಹೆಚ್ಚಾಗಿ ಸರಕಾರಿ ಕಾಲೇಜು ಅಥವಾ 'ಉತ್ತಮ ಹೆಸರು ಹೊಂದಿರುವ' ಖಾಸಗಿ ಶಿಕ್ಷಣ ಸಂಸ್ಥೆಗಳನ್ನಷ್ಟೇ ನೆಚ್ಚಿಕೊಳ್ಳುತ್ತಾರೆ. ಬದುಕು ಕಟ್ಟಿಕೊಳ್ಳಲು ಪೂರಕವಾಗುವಂಥ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿರುವ ಚರ್ಚ್ ಅಥವಾ ಮಠಗಳು ನಡೆಸುವ ಸಂಸ್ಥೆಗಳಿಗೆ ಸೇರಲೂ ಪೈಪೋಟಿ ಇರುತ್ತದೆ. ಹೊಸದಾಗಿ ಆರಂಭವಾಗಿರುವ 'ಫ್ಯಾನ್ಸಿ' ಖಾಸಗಿ ಕಾಲೇಜುಗಳು ವಿದ್ಯಾರ್ಥಿ ಹಾಗೂ ಪೋಷಕರ ಕಟ್ಟಕಡೆಯ ಆಯ್ಕೆಯಷ್ಟೇ ಆಗಿರುತ್ತವೆ. ಇದಕ್ಕೆ ಕಾರಣ ಹುಡುಕುತ್ತ ಹೊರಟರೆ ನಮಗೆ ಎರಡು ಅಂಶಗಳು ಎದ್ದು ಕಾಣುತ್ತವೆ. ಮೊದಲನೆಯದಾಗಿ, ಫ್ಯಾನ್ಸಿ ಖಾಸಗಿ ಕಾಲೇಜುಗಳು ಹೆಚ್ಚು ಹಣ ಪೀಕುತ್ತವೆ; ಇಷ್ಟು ದೊಡ್ಡ ಮೊತ್ತದ ಹಣದಲ್ಲಿ ವಿದೇಶಿ ವಿವಿಗಳಲ್ಲಿಯೇ ವ್ಯಾಸಂಗ ಮಾಡಬಹುದು ಎಂಬ ಜನಪ್ರಿಯ ನಂಬಿಕೆ. ಎರಡನೆಯದಾಗಿ, ಈ ಸಂಸ್ಥೆಗಳು ಹೇಳಿಕೊಳ್ಳುವಂತೆ ಇವು ವಿಶ್ವದರ್ಜೆಯ ಶಿಕ್ಷಣ ನೀಡುತ್ತವೋ ಅಥವಾ ಮಾಸ್ತರರೇ ಇಲ್ಲದೆ ಒದ್ದಾಡುತ್ತವೋ ಎಂದು ಹೇಳಲು ಬರುವುದಿಲ್ಲ.
ಅಸಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿಷಯಕ್ಕೆ ಬಂದಾಗ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ನಂಬಿಕೆಯ ಕೊರತೆ ಎದ್ದುಕಾಣುತ್ತದೆ. ಈ ಅನುಮಾನಕ್ಕೆ ಕಾರಣಗಳೂ ಇಲ್ಲದಿಲ್ಲ. ನಾವು ತಲೆತಲಾಂತರದಿಂದಲೂ ಶಿಕ್ಷಣ ನೀಡುವುದನ್ನು 'ನಿಸ್ವಾರ್ಥ ಸೇವೆ' ಎಂದೇ ಪರಿಗಣಿಸಿದ್ದೇವೆ. ಸರಕಾರಿ ಸಂಸ್ಥೆಗಳು ಎಲ್ಲಿಯವರೆಗೆ ಉತ್ತಮ ಶಿಕ್ಷಣ ನೀಡುತ್ತಿದ್ದವೋ ಅಲ್ಲಿಯವರೆಗೂ ಎಲ್ಲೂ ಸಲ್ಲದವರಷ್ಟೇ ಖಾಸಗಿ ಕಾಲೇಜುಗಳ ಕಡೆ ಮುಖ ಮಾಡುತ್ತಿದ್ದರು. ಹೀಗಾಗಿ ಖಾಸಗಿ ಸಂಸ್ಥೆಗಳಿಗೆ ಸೇರುವವರ ಕುರಿತು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಆದರೆ ರಾಜ್ಯ ಸರಕಾರಗಳು ನಡೆಸುವ ಶಾಲೆ ವಿಷಯದಲ್ಲಿ ಈ ಅಭಿಪ್ರಾಯ ಖಂಡಿತ ಇಲ್ಲ. ಗುಣಮಟ್ಟದ ಕೊರತೆ, ಪಾಠಗಳು ಕಾಲಾನುಕ್ರಮದಲ್ಲಿ ಬದಲಾಗದೇ ಓಬಿರಾಯನ ಕಾಲದ ವಿಶ್ಲೇಷಣೆಯೇ ಪುಸ್ತಕಗಳಲ್ಲಿ ಉಳಿದುಕೊಂಡಿರುವುದು, ಅಸೂಕ್ತ ನಿರ್ವಹಣೆ ಮುಂತಾದ ಸಾವಿರ ಸಮಸ್ಯೆಗಳ ಸುಳಿಗೆ ಸಿಲುಕಿರುವ ರಾಜ್ಯ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕಿದ ಕಾರಣಕ್ಕಾಗಿಯೇ ಶಾಲಾ ಶಿಕ್ಷಣದಲ್ಲಿ ಖಾಸಗಿ ಸಂಸ್ಥೆಗಳ ಪ್ರಭಾವ ದಟ್ಟವಾಗಿದೆ. ಇಂದಿನ ಖಾಸಗಿ ಶಾಲೆಗಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ಆವರಿಸಿಕೊಂಡಿದ್ದು, ಇವನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿವೆ.
ಆದಾಗ್ಯೂ ಉನ್ನತ ವ್ಯಾಸಂಗದ ವಿಷಯಕ್ಕೆ ಬಂದರೆ ಮಾತ್ರ ಖಾಸಗಿ ವಲಯ ಈ ಪರಿ ಪ್ರಭಾವ ಉಳಿಸಿಕೊಂಡಿಲ್ಲ. ಇವು ನೀಡುವ ಶಿಕ್ಷಣದ ಗುಣಮಟ್ಟವಂತೂ ಯಾವಾಗಲೂ ಪ್ರಶ್ನಾರ್ಹ. ಈ ಅವ್ಯವಸ್ಥೆಯ ಹಿಂದೆ ಸಾವಿರ ಕಾರಣಗಳಿವೆ. ಖಾಸಗಿ ಕಾಲೇಜುಗಳ ಮೌಲ್ಯಮಾಪನ ಮಾಡಲು ಸರಕಾರದಿಂದ ಒಂದು ನಿರ್ದಿಷ್ಟ ಸಮಿತಿ ಅಥವಾ ಸಂಸ್ಥೆ ನಿಯೋಜಿತವಾಗಿಲ್ಲ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕರುಣಿಸುವ ಡೀಮ್ಡ್ ವಿವಿ ಸ್ಥಾನಮಾನವಂತೂ ಅರ್ಥ ಕಳೆದುಕೊಂಡಿದೆ. ಹೀಗಾಗಿ ಖಾಸಗಿ ಕಾಲೇಜುಗಳು ನೀಡುವ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳು ಕಾರ್ಮಿಕ ಮಾರುಕಟ್ಟೆಯಲ್ಲಿ ಉಪಯೋಗಕ್ಕೆ ಬರುತ್ತವೆಯೇ ಅಥವಾ ಇಲ್ಲವೇ ಎಂಬುದೇ ದೊಡ್ಡ ಸಂಶಯವಾಗಿ ಕಾಡತೊಡಗಿದೆ. ಮತ್ತೊಂದು ದುರಂತ ಸಂಗತಿಯೆಂದರೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ನಮಗೆ ಮಾಹಿತಿ ಲಭ್ಯವಾಗುವುದು ಜಾಹೀರಾತಿನ ಮೂಲಕ; ಸೋಪು, ಸೆಂಟು, ಪೌಡರ್ ಮುಂತಾದ ವಸ್ತುಗಳ ಜಾಹೀರಾತಿನಂತೆ. ಈ ಬ್ರಾಂಡ್‌ನ ಒಳ ಉಡುಪು ಧರಿಸಿದರೆ ಹುಡುಗಿಯರು ಮೈಮೇಲೆ ಬಿದ್ದು ಕಿಸ್ ಮಾಡುತ್ತಾರೆ ಎಂಬ ಧಾಟಿಯಲ್ಲಿ ಈ ಸಂಸ್ಥೆಗಳು ತಮ್ಮ ಕಟ್ಟಡದ ವಿನ್ಯಾಸ, ಖಾಲಿ ಇರುವ ಜಾಗ, ತರಗತಿ ಕೊಠಡಿಗಳ ವಿಶಾಲತೆ, ವಿದೇಶಿ ಮಾಸ್ತರುಗಳನ್ನು ಕರೆಸಿ ಪಾಠ ಮಾಡಿಸುವುದು ಮುಂತಾದ ಆಮಿಷ ಒಡ್ಡುತ್ತವೆ. ಅಸಲಿಗೆ ಆಗುತ್ತಿರುವುದೇನೆಂದರೆ ಇವು ನೀಡುವ ಜಾಹೀರಾತಿನಲ್ಲಿರುವ ಸುಳ್ಳುಗಳೇ ಮುಖಕ್ಕೆ ರಾಚುವಂತೆ ಕಂಡು ಮತ್ತಷ್ಟು ಸಂಶಯಕ್ಕೆ ಎಡೆಯಾಗುತ್ತಿದೆ!
ಖಾಸಗಿ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನವನ್ನು ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ನಡೆಸಿ ಶ್ರೇಣಿ ನೀಡುತ್ತವೆ. ಇದನ್ನು ಬಿಟ್ಟರೆ ಮತ್ತೊಂದು ಅಧಿಕೃತ ಮೌಲ್ಯಮಾಪನ ಎಂದೂ ನಡೆಯುವುದಿಲ್ಲ. ಕಾಲೇಜುಗಳಿಗೆ ಶ್ರೇಣಿ ನೀಡುವುದೂ ಮಾರ್ಕೆಟಿಂಗ್ ಏಜೆನ್ಸಿಗಳು. ಈ ಹಿನ್ನೆಲೆಯಲ್ಲಿ ಇದರ ಸಾಚಾತನ ಅಪನಂಬಿಕೆ ಹುಟ್ಟಿಸಿದೆ. ಸತ್ಯದ ಕತೆ ಏನೆಂದರೆ ಪತ್ರಿಕೆ ಹಾಗೂ ನಿಯತಕಾಲಿಕೆಗಳು ಕಾಲೇಜುಗಳಿಗೆ ಶ್ರೇಣಿ ಕರುಣಿಸುವುದು, ಹೊಗಳಿ ಬರೆಯುವುದರ ಹಿಂದೆ ಕಮಾಯಿ ಕರಾಮತ್ತು ಅಡಗಿರುತ್ತದೆ. ವಿಶೇಷ ಪುರವಣಿ ಅಥವಾ ಶಿಕ್ಷಣ ಪುರವಣಿಯ ತುಂಬೆಲ್ಲ ನಾನಾ ಶಿಕ್ಷಣ ಸಂಸ್ಥೆಗಳ ಜಾಹೀರಾತು ರಾರಾಜಿಸುವುದೇ ಪತ್ರಿಕೆಗಳ ಆದಾಯ ಮರ್ಮವನ್ನು ಎತ್ತಿ ತೋರಿಸುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮರು ರೂಪಿಸಬೇಕಾದರೆ ಇವುಗಳ ಅಧಿಕೃತ ಮೌಲ್ಯಮಾಪನ ಕಾಲ ಕಾಲಕ್ಕೆ ನಡೆಯಬೇಕು. ಶುಲ್ಕ ಪ್ರಮಾಣ, ಸೌಲಭ್ಯ ವಂಚಿತರೆಡೆಗೆ ಈ ಸಂಸ್ಥೆಗಳಿಗಿರುವ ಕಾಳಜಿ, ಇವು ಕಾರ್ಯ ನಿರ್ವಹಿಸುತ್ತಿರುವ ರೀತಿ, ಶಿಕ್ಷಣದ ಗುಣಮಟ್ಟ ಇತ್ಯಾದಿಗಳು ಪರಾಮರ್ಶೆಗೆ ಒಳಪಡಬೇಕು. ಸದ್ಯಕ್ಕೆ ಹೇಳುವುದಾದರೆ, ಪ್ರಮಾಣೀಕರಿಸುವ ಸಂಸ್ಥೆಗಳು ಒಮ್ಮೆ ಪರಾಮರ್ಶೆ ಮಾಡಿ ಕಾಲೇಜು ನಡೆಸಲು ಅನುಮತಿ ನೀಡಿ ಕೈ ತೊಳೆದುಕೊಳ್ಳುತ್ತಿವೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧಿಕೃತ ಹಾಗೂ ಕಾಲಾನುಕ್ರಮದ ಪರಾಮರ್ಶೆಯಿಂದಾಗಿ ನಿಶ್ಚಿತವಾಗಿಯೂ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸರಿ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಇಷ್ಟಕ್ಕೂ ಶಿಕ್ಷಣವೆಂದರೆ ಅಂಗಡಿಯಲ್ಲಿ ಮಾರುವ ಟೂತ್‌ಪೇಸ್ಟ್ ಅಲ್ಲ; ಕೊಂಡು ತಂದು, ಬಳಸಿ, ಸರಿಹೋಗದಿದ್ದರೆ ತಿಪ್ಪೆಗೆ ಎಸೆದು ಮತ್ತೊಂದು ಬ್ರಾಂಡ್‌ನ ಟೂತ್‌ಪೇಸ್ಟ್ ಕಡೆ ಗಮನ ಹರಿಸಲು, ಅಲ್ಲವೇ?
Courtesy: Vijaya Karnataka, July 3, 2013