ಸರಕಾರಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಬೋಧಕೇತರ ಸಿಬ್ಬಂದಿ ಮತ್ತು ಉಪನ್ಯಾಸಕರ ಸಾವಿರಾರು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ನೂತನ ಸರಕಾರ ಮುಂದಾಗುತ್ತಿಲ್ಲ. ಹಿಂದಿನ ಬಿಜೆಪಿ ಸರಕಾರದ ನೀತಿಯನ್ನೇ ಅನುಸರಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೂ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಒಂದು ವರ್ಷಕ್ಕೆ ಮಾತ್ರವೇ ನೇಮಿಸಿಕೊಳ್ಳಲು ನೂತನ ಸರಕಾರ ಮುಂದಾಗಿದೆ. ಈ ಅತಿಥಿ ಉಪನ್ಯಾಸಕರಿಗೆ ವೇತನ ನಿಗದಿ ಮಾಡಿರುವುದು ನೋಡಿದರೆ, ಈ ಸರಕಾರ ಕೂಡ ಉನ್ನತ ಶಿಕ್ಷಣವನ್ನು ನಿರ್ಲಕ್ಷಿಸುತ್ತಿರುವುದು ಎದ್ದು ಕಾಣುತ್ತಿದೆ. ಪದವಿ ಕಾಲೇಜುಗಳ ಅತಿಥಿ ಉನ್ಯಾಸಕರನ್ನು ನೇಮಿಸಿಕೊಳ್ಳಲು ಪಿ.ಎಚ್‌ಡಿ, ನೆಟ್, ಸ್ಲೆಟ್ ಆಗಿರುವವರಿಗೆ ತಿಂಗಳಿಗೆ ರೂ. 10,000 ರೂ. ಉಳಿದವರಿಗೆ ರೂ. 8,000 ಮಾತ್ರ ನಿಗದಿ ಮಾಡಲಾಗಿದೆ. ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ 7,000ರೂ. ವೇತನ ನಿಗದಿ ಮಾಡಲಾಗಿದೆ. ಹಿಂದಿನಂತೆಯೇ ವರ್ಷಕ್ಕೆ ಒಂದು ಬಾರಿ ಸಂಬಳ ನೀಡುವ ವಿಚಿತ್ರ ಪದ್ಧತಿಯನ್ನೇ ಪಾಲಿಸಲು ಈ ಸರಕಾರ ಕೂಡ ಹೊರಟಿದೆ.
ಪದವಿ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ್ದವರನ್ನು 2003ರಲ್ಲಿ ಕಾಯಂಗೊಳಿಸಿದ್ದೇ ಕೊನೆಯಾಯಿತು. ಆ ನಂತರದಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿಲ್ಲ. 2006-07ರಿಂದಲೂ ಅತಿಥಿ ಉಪನ್ಯಾಸಕರೆಂದು ನೇಮಕ ಮಾಡಿಕೊಂಡು, ತಿಂಗಳಿಗೆ ಕೇವಲ ಐದು ಸಾವಿರ ಸಂಬಳವನ್ನು ನಿಗದಿ ಮಾಡಿ, ಅದನ್ನೂ ವರ್ಷಕ್ಕೊಮ್ಮೆ, ಒಂದೂವರೆ ವರ್ಷಕ್ಕೊಮ್ಮೆ ನೀಡುತ್ತಾ ಬರಲಾಗಿದೆ. ಒಂದೇ ಒಂದು ಬಾರಿ 1,500 ಹುದ್ದೆಗಳನ್ನು ನೇಮಕ ಮಾಡಿಕೊಂಡಿದ್ದು ಬಿಟ್ಟರೆ, ಉಳಿದಂತೆ ಇಲ್ಲಿಯತನಕ ಕಾಯಂ ಭರ್ತಿ ಮಾಡಿಕೊಳ್ಳಲು ಯಾವ ಸರಕಾರಗಳೂ ಮುಂದಾಗಲೇ ಇಲ್ಲ. ಮಿಗಿಲಾಗಿ, ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ತೀರಾ ಅಗತ್ಯ ಎನಿಸಿರುವ ಉಪನ್ಯಾಸಕ ಹುದ್ದೆಗಳನ್ನು ಕಾಯಂ ನೇಮಕ ಮಾಡಿಕೊಂಡಲ್ಲಿ, ಅವರಿಗೆ ನೀಡುವ ವೇತನದಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ'(ಯುಜಿಸಿ) ಶೇ.75ರಷ್ಟು, ರಾಜ್ಯ ಸರಕಾರ ಶೇ.25ರಷ್ಟನ್ನು ಮಾತ್ರ ಭರಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಕಾಯಂ ನೇಮಕಾತಿಗೆ ಮುಂದಾದಲ್ಲಿ ದೊಡ್ಡ ಮಟ್ಟದಲ್ಲಿ ಹಣದ ನೆರವು ಹರಿದು, ಭಾರಿ ನಷ್ಟ ಸಂಭವಿಸಲಿದೆ ಎಂದೇನೂ ಇಲ್ಲ. ಇನ್ನು, ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 12,000 ಉಪನ್ಯಾಸಕ ಹುದ್ದೆಗಳ ಪೈಕಿ ಕೇವಲ 1,500 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿದಿದ್ದರೂ, ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದೆ ವಿಳಂಬ ಮಾಡಲಾಗುತ್ತಿದೆ.
ಈ ರೀತಿಯಾದಲ್ಲಿ ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಇವತ್ತಿನ ಸ್ಪರ್ಧಾ ಪ್ರಪಂಚದಲ್ಲಿ ಮುಂದೆ ಬರುವುದಾದರೂ ಹೇಗೆ? ಇಂತಹ ಪರಿಸ್ಥಿತಿಗೆ ಮೂಲ ಕಾರಣ ನಮ್ಮನ್ನಾಳುವ ಸರಕಾರಗಳು ಶಿಕ್ಷಣ ಕ್ಷೇತ್ರವನ್ನು ಸೇವಾ ವಲಯದಿಂದ ವಾಣಿಜ್ಯೋದ್ಯಮಗೊಳಿಸಿದ್ದು ಹಾಗೂ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುತ್ತಿರುವುದು. ಜತೆಗೆ ಖಾಸಗಿ ಶಾಲಾ-ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಪ್ರೋತ್ಸಾಹ ನೀಡಿ ಆರಂಭಿಸಲು ಅನುಮತಿಯನ್ನು ನೀಡುತ್ತಿರುವುದು. ಹೀಗಾಗಿಯೇ ಖಾಸಗಿ ಶಿಕ್ಷಣ ಸಂಸ್ಥೆಗಳ ಸಾಮ್ರಾಜ್ಯಗಳ ಎದುರು, ಸರಕಾರಿ ಶಾಲಾ-ಕಾಲೇಜುಗಳು ಮೂಲೆ ಗುಂಪಾಗುತ್ತಿವೆ. ಹಣ ಉಳ್ಳವರಿಗೆ ಮಾತ್ರ ಶಿಕ್ಷಣ ಮತ್ತು ಉದ್ಯೋಗವು ಮೀಸಲಾಗುತ್ತಿದೆ. ಸರಕಾರಿ ಶಿಕ್ಷಣ ಕ್ಷೇತ್ರ ಹಣಕಾಸಿನ ಬೆಂಬಲವಿಲ್ಲದೆ ಕ್ಷೀಣಿಸುತ್ತಿದೆ ಎಂಬುದಕ್ಕೆ ಸುಸಜ್ಜಿತ ಕಟ್ಟಡ, ಪೀಠೋಪಕರಣಗಳು, ಶೌಚಾಲಯ, ಕುಡಿಯುವ ನೀರು ಮುಂತಾದ ಕನಿಷ್ಠ ಸೌಲಭ್ಯಗಳೂ ಇಲ್ಲದೆ ದುಸ್ಥಿತಿಯಲ್ಲಿರುವ, ರಾಜಧಾನಿ ಮತ್ತು ಜಿಲ್ಲೆಗಳಲ್ಲಿರುವ ಸರಕಾರಿ ಶಿಕ್ಷಣ ಇಲಾಖೆಗಳ ಕಚೇರಿಗಳಿಗಿಂತ ದೊಡ್ಡ ನಿದರ್ಶನ ಬೇಕಿಲ್ಲ. ಅಧಿಕಾರಿಗಳ ಕಚೇರಿಗಳೇ ಹೀಗಿದ್ದ ಮೇಲೆ, ಇನ್ನು ಕಾಲೇಜುಗಳ ಶೈಕ್ಷಣಿಕ ಮೂಲ ಸೌಕರ್ಯಗಳ ಬಗ್ಗೆ ಮಾತಾಡುವ ಪ್ರಶ್ನೆಯೇ ಇಲ್ಲ.
ಸರಕಾರದ ನೀತಿಗಳು ಬದಲಾಗದೆ ನಮ್ಮ ಸರಕಾರಿ ಶಾಲಾ ಕಾಲೇಜುಗಳಿಗೆ ಉಳಿಗಾಲವಿಲ್ಲ. ಹೀಗಾಗಿಯೇ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವುದು ಕಷ್ಟ. ಸಿಕ್ಕರೂ ಸ್ಪಧೆಯಲ್ಲಿ ಎಲ್ಲರೆದುರು ಸರಿಸಮ ನಿಲ್ಲುವುದು ಕಷ್ಟಸಾಧ್ಯ. ಇವೆಲ್ಲ ತಾಪತ್ರಯಗಳ ನಡುವೆಯೂ ಕಷ್ಟಪಟ್ಟು ಪದವಿ ಗಳಿಸಿದವರಿಗೆ ಖಾಯಂ ಉದ್ಯೋಗ ದಕ್ಕದಿದ್ದರೆ ಹೇಗೆ? ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು, 'ಕೇಂದ್ರೀಯ ಶಾಸನ'ವೊಂದನ್ನು ಜಾರಿಗೆ ತಂದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಜನತೆಗೆ ಉದ್ಯೋಗದ ಭದ್ರತೆ ದೊರೆಯುತ್ತದೆ. ಇಂತಹ ಸಾಮಾಜಿಕ ನ್ಯಾಯವೇ ನಮಗೆ ಈಗ ತುರ್ತಾಗಿ ಬೇಕಿರುವುದು.
ಸರಕಾರಿ ಶಾಲಾ-ಕಾಲೇಜುಗಳ ಜತೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು ಎರಡು ಲಕ್ಷ ಹುದ್ದೆಗಳನ್ನು ತುಂಬಲೂ ಸರಕಾರ ಮನಸ್ಸು ಮಾಡಬೇಕು. ಈ ಹುದ್ದೆಗಳನ್ನು ಭರ್ತಿಮಾಡಲು ಸರಕಾರ ಮುಂದಾದರೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಂತಾಗುತ್ತದೆ. ಇದರಿಂದ ಎಲ್ಲ ಇಲಾಖೆಗಳಲ್ಲಿ ಕೆಲಸಗಳು ಚುರುಕಾಗಿ, ಆಡಳಿತಕ್ಕೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ನೇಮಕಾತಿ ಪ್ರಕ್ರಿಯೆಗಳಲ್ಲಿ ಮೀನಾಮೇಷ ಎಣಿಸಿದರೆ ಆಡಳಿತ ಯಂತ್ರಕ್ಕೆ ಹಲವು ಕ್ಷೇತ್ರಗಳಲ್ಲಿ ಹಿನ್ನಡೆಯಾಗಬಹುದು. ಆದರೆ, ಬೇರೆ ಕ್ಷೇತ್ರಗಳಲ್ಲಿನ ಹಿನ್ನಡೆ ಬೇಗ ಗೊತ್ತಾದಂತೆ ಶಿಕ್ಷಣ ಕ್ಷೇತ್ರದಲ್ಲಿನ ಹಿನ್ನಡೆ ಗೊತ್ತಾಗುವುದಿಲ್ಲ
by B Rajashekhar Murthy
Courtesy: Vijayakarnataka, July 6, 2013