ವಿದ್ಯೆ ಹಾಗೂ ಸೇವಾ ಅರ್ಹತೆ ಇಲ್ಲದ ಅಭ್ಯರ್ಥಿಗಳನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಸಹ ಪ್ರಾಧ್ಯಾಪಕರನ್ನಾಗಿ ನೇಮಿಸಿ ಉನ್ನತ ಶಿಕ್ಷಣ ಇಲಾಖೆ ಎಡವಟ್ಟು ಮಾಡಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ವಿರೋಧದ ನಡುವೆಯೇ ಹಿಂದಿನ ಸರ್ಕಾರ ಈ ಆದೇಶ ಹೊರಡಿಸಿದೆ. ಈ 90 ಅಭ್ಯರ್ಥಿಗಳ ನೆರವಿಗಾಗಿ ರಾಜ್ಯ ಸರ್ಕಾರ ನಿಯಮವನ್ನೇ ಬದಲಿಸಿದೆ.
ಇದರಿಂದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಇತರ ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಂಶುಪಾಲರ ವೇತನಗಳಲ್ಲಿ ಭಾರಿ ವ್ಯತ್ಯಾಸವಾಗಿದೆ. ಈ ನೇಮಕ ಪ್ರಕ್ರಿಯೆಯಲ್ಲಿ ರಾಜಕೀಯ ಪ್ರಭಾವವಿರುವ ಸಂಶಯ ಇದೆ.
6ನೇ ವೇತನ ಆಯೋಗದ ವರದಿ ಅನುಷ್ಠಾನ ಜಾರಿಯಲ್ಲಿನ ಷರತ್ತು ಹಾಗೂ ಎಐಸಿಟಿಇ ನಿಯಮ ಪ್ರಕಾರ ಸಹಾಯಕ ಪ್ರಾಧ್ಯಾಪಕರು ಸಹ ಪ್ರಾಧ್ಯಾಪಕಾರು ಬಡ್ತಿ ಹೊಂದಲು ಕಡ್ಡಾಯವಾಗಿ 3 ವರ್ಷ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರಬೇಕು. ಇದನ್ನು ಹೊರತುಪಡಿಸಿ ಕಡ್ಡಾಯವಾಗಿ ಪಿಎಚ್‌ಡಿ ಹೊಂದಿರಬೇಕು. ಆದರೆ ಈ ವಿಚಾರಗಳನ್ನು ಉನ್ನತ ಶಿಕ್ಷಣ ಇಲಾಖೆ ಕಡೆಗಣಿಸಿದೆ.
ಸಂದೇಹವೇನು?: 2009ರಲ್ಲಿ ಸರ್ಕಾರಿ ಎಂಜಿನಿರಿಂಗ್ ಕಾಲೇಜುಗಳ 444 ಹುದ್ದೆಗಳಿಗೆ ಕೆಪಿಎಸ್‌ಸಿ ಮೂಲಕ ನೇಮಕ ಪ್ರಕ್ರಿಯೆ ನಡೆಯಿತು. ಇದರಲ್ಲಿ 90 ಸಹಾಯಕ ಪ್ರಾಧ್ಯಾಪಕರ ನೇಮಕವೂ ಆಯಿತು. ಈ ಅಭ್ಯರ್ಥಿಗಳು 2010ರ ಸಪ್ಟೆಂಬರ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಇದಾದ ಬಳಿಕ ಕಳೆದ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರವು 6ನೇ ವೇತನ ಶ್ರೇಣಿ ನಿಯಮವನ್ನೇ ಬದಲಿಸಿ ಹೊಸ ಆದೇಶ ನೀಡಿತು. ಇದರ ಪ್ರಕಾರ 2007ರಿಂದ ಪೂರ್ವಾನ್ವಯವಾಗುವಂತೆ ಸಹಾಯಕ ಪ್ರಾಧ್ಯಾಪಕರನ್ನು ಸಹ ಪ್ರಾಧ್ಯಾಪಕರೆಂದು ಪದನಾಮ ಮಾಡಲಾಯಿತು.
ಎಐಸಿಇಟಿ ನಿಯಮಗಳಲ್ಲಿ 2 ಅಂಶಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ಪ್ರತಿಯೊಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ 1:2:6 ಅನಾಪತದಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರಿರಬೇಕು. ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಅನುಪಾತ ಸಮರ್ಪಕವಾಗಿರಲಿಲ್ಲ. ಇದೇ ಕಾರಣದಿಂದ ಸಹಾಯಕ ಪ್ರಾಧ್ಯಾಪಕರನ್ನು ಸಹ ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರನ್ನು ಸಹಾಯಕ ಪ್ರಾಧ್ಯಾಪಕರನ್ನಾಗಿ ಪದೋನ್ನತಿ ಮಾಡಲಾಯಿತು.
ಆದರೆ ಎಐಸಿಟಿಇ ನಿಯಮ ಹೇಳುವ ಪ್ರಕಾರ ಸಹ ಪ್ರಾಧ್ಯಾಪಕ ಹುದ್ದೆಗೆ ಬರುವ ಅಭ್ಯರ್ಥಿಗಳು ಕಡ್ಡಾಯವಾಗಿ ಪಿಎಚ್‌ಡಿ ಮುಗಿಸಿರಲೇಬೇಕು. ಇದರ ಜತೆ 3 ವರ್ಷಗಳ ಸಹಾಯಕ ಪ್ರಾಧ್ಯಾಪಕ ಸೇವೆಯ ಅನುಭವವಿರಬೇಕು. ಇಂತಹ ಯಾವುದೆ ಅರ್ಹತೆಗಳನ್ನು ಪರಿಗಣಿಸದೇ ನೇಮಕ ಪದೋನ್ನತಿ ನೀಡಿದರೆ ಅರ್ಹತೆ ವಿಚಾರದಲ್ಲಿ ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರಿಗೆ ಯಾವುದೇ ವ್ಯತ್ಯಾಸವಿರುವುದಿಲ್ಲ.
ಎಐಸಿಟಿಇ ನಿಯಮಗಳ ಪ್ರಕಾರ ಈ 90ರಲ್ಲಿ 85 ಅಭ್ಯರ್ಥಿಗಳು ಸಹ ಪ್ರಾಧ್ಯಾಪಕರಲ್ಲ. ಏಕೆಂದರೆ ಕೇವಲ 5 ಮಂದಿ ಮಾತ್ರ ಪಿಎಚ್‌ಡಿ ಪದವಿ ಹೊಂದಿದ್ದಾರೆ.
ಈ ಪದೋನ್ನತಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಹಿಂದಿನ ಉಪ ಕಾರ್ಯದರ್ಶಿ ಅವರು ನಿವೃತ್ತಿಗೆ ಕೆಲ ದಿನದ ಮುಂಚೆ ಈ ಆದೇಶ ನೀಡಿದರು. ಮತ್ತೋರ್ವ ಉಪ ಕಾರ್ಯದರ್ಶಿ ಸರ್ಕಾರದ ನಿರ್ಣಯ ಕಾನೂನು ಬಾಹಿರ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಪ್ರಸ್ತುತ ಈ 90 ಸಹ ಪ್ರಾಧ್ಯಾಪಕರು 84 ಸಾವಿರದಿಂದ 1.10 ಲಕ್ಷದವರೆಗೆ ವೇತನ ಪಡೆಯುತ್ತಿದ್ದಾರೆ.
ವಿದ್ಯಾರ್ಹತೆ ಹಾಗೂ ಸೇವಾ ಅನುಭವವನ್ನು ಪರಿಗಣಿಸದೇ ನೇರವಾಗಿ ಸಹ ಪ್ರಾಧ್ಯಾಪಕರ ಹುದ್ದೆಗೆ ಪದೋನ್ನತಿಯನ್ನು ನೀಡುವುದಾದರೆ ಎಲ್ಲ ಉಪನ್ಯಾಸಕರನ್ನು ಪರಿಗಣಿಸಬೇಕಿತ್ತು. ಈ 90 ಅಭ್ಯರ್ಥಿಗಳು ಪಿಎಚ್‌ಡಿ ಹೊಂದಿರದಿದ್ದರೂ ಸಹ ಪ್ರಾಧ್ಯಾಪಕರನ್ನಾಗಿ ಹೇಗೆ ನೀಮಿಸಲಾಗಿದೆ
Courtesy: Kannada Prabha, August 05, 2013