ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ 2014–15ನೇ ಸಾಲಿನಿಂದ ಏಕರೂಪ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಮಂಗಳೂರು ವಿ.ವಿ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಅಧ್ಯಕ್ಷತೆಯ ಸಮಿತಿ ಈ ಸಂಬಂಧ ವರದಿ ನೀಡಿತ್ತು ಎಂದು ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿವಿಧ ವಿ.ವಿ.ಗಳು ಬೇರೆ ತಿಂಗಳಲ್ಲಿ ಪ್ರವೇಶ, ಪರೀಕ್ಷೆ ನಡೆಸುತ್ತಿವೆ. ಫಲಿತಾಂಶ ಪ್ರಕಟ, ಅಂಕಪಟ್ಟಿ ನೀಡುವುದರಲ್ಲಿ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸುವುದು ಏಕರೂಪ ವೇಳಾಪಟ್ಟಿ ಉದ್ದೇಶ ಎಂದರು.
ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಶ್ವವಿದ್ಯಾಲಯಗಳಲ್ಲಿ ಬೇಕಾದ ಕೋರ್ಸ್, ಸೀಟು ಆಯ್ಕೆ ಮಾಡಿಕೊಳ್ಳಲು ಇದರಿಂದ ಅನುಕೂಲವಾಗಲಿದೆ. ಉದ್ಯೋಗ ಮೇಳ ಆಯೋಜಿಸಲು, ಶೈಕ್ಷಣಿಕ ಕಾರ್ಯಕ್ರಮಗಳ ಗುಣಮಟ್ಟ ಕಾಪಾಡಲು ಸಹಕಾರಿಯಾಗಲಿದೆ ಎಂದು ಆಶಿಸಿದರು.
ಪರಿಶೀಲನಾ ಆಯೋಗ: ವಿ.ವಿ ಗಳ ಈಗಿನ ವ್ಯವಸ್ಥೆಯನ್ನು ಪರಿಶೀಲಿಸಿ ಸುಧಾರಣೆಗಳನ್ನು ತರುವ ಸಂಬಂಧ ವರದಿ ನೀಡಲು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಎನ್.ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಪರಿಶೀಲನಾ ಆಯೋಗ ರಚಿಸಲಾಗಿದೆ. ವಿಶ್ರಾಂತ ಕುಲಪತಿಗಳಾದ ಪ್ರೊ.ವಿ.ಬಿ.ಕುಟಿನೊ, ಪ್ರೊ.ಮುನಿ ಯಮ್ಮ, ಪ್ರೊ.ಎಂ.ಮಹದೇವಪ್ಪ ಹಾಗೂ ಡಾ.ಎ.ಎಂ.ಪಠಾಣ್ ಅವರು ಸಮಿತಿಯ ಸದಸ್ಯರಾಗಿದ್ದಾರೆ ಎಂದರು.
ಪದವಿ ವಿದ್ಯಾರ್ಥಿಗಳಿಗೆ ರಾಜೀವ್ ಸಾಲ ಯೋಜನೆ: ಹಿಂದುಳಿದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವು ನೀಡಲು ರಾಜ್ಯ ಸರ್ಕಾರ ‘ರಾಜೀವ್‌ಗಾಂಧಿ ಸಾಲ ಯೋಜನೆ’ ರೂಪಿಸಿದೆ. ಸಾಮಾನ್ಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸಾಲಿನಿಂದಲೇ ಇದರ ಲಾಭ ಪಡೆಯಬಹುದು ಎಂದು ತಿಳಿಸಿದರು. ಸದ್ಯ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವವರ ಪ್ರಮಾಣ ಶೇ 25.5ರಷ್ಟು ಇದೆ. 2020ಕ್ಕೆ ಇದನ್ನು ಶೇ 35ಕ್ಕೆ ಏರಿಸಬೇಕು ಎಂಬುದು ಇದರ ಉದ್ದೇಶ ಎಂದರು.
ಶಿಕ್ಷಣ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪರಿಶಿಷ್ಟರು, ಹಿಂದುಳಿದ ವರ್ಗದವರು, ಆರ್ಥಿಕವಾಗಿ ಹಿಂದುಳಿದವರು ಉನ್ನತ ಶಿಕ್ಷಣಕ್ಕೆ ಬರುತ್ತಿಲ್ಲ. ಅವರಿಗೆ ಸಾಲ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು. ಸರ್ಕಾರಿ, ಅನುದಾನಿತ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 50 ಸಾವಿರ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಇದರ ಉಪಯೋಗ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ಅರ್ಹತೆ: ಪಿಯುಸಿಯಲ್ಲಿ ಶೇ 50ರಷ್ಟು ಅಂಕ ಪಡೆದು ಪದವಿ, ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 2.5 ಲಕ್ಷ ಮೀರಿರಬಾರದು.
ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 60 ಸಾವಿರ ಪ್ರಕಾರ ಮೂರು ವರ್ಷಕ್ಕೆ ರೂ. 1.80 ಲಕ್ಷ ಹಾಗೂ ಐದು ವರ್ಷದ ಇಂಟಿಗ್ರೇಟೆಡ್ ಕೋರ್ಸ್‌ಗೆ ರೂ. 3 ಲಕ್ಷ ಸಾಲ ನೀಡಲಾಗುವುದು.
ಮರುಳಯ್ಯ ಅಧ್ಯಕ್ಷತೆಯಲ್ಲಿ ಸಮಿತಿ
ಕನ್ನಡ ಮಾಧ್ಯಮದಲ್ಲಿ ಮಾನವಿಕ ವಿಜ್ಞಾನ ವಿಷಯಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹಿರಿಯ ಸಾಹಿತಿ ಪ್ರೊ.ಸಾ.ಶಿ.ಮರುಳಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಉನ್ನತ ಶಿಕ್ಷಣ ಪರಿಷತ್ ಸದಸ್ಯ ಪ್ರೊ.ಆರ್.ಎಲ್.ಎಂ.ಪಾಟೀಲ, ಮೈಸೂರು ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ಎಸ್.ಲೀಲಾವತಿ ಸಮಿತಿ ಸದಸ್ಯರು. ತುಮಕೂರು ವಿವಿ ಕುಲಸಚಿವ ಪ್ರೊ.ಶಿವಲಿಂಗಯ್ಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಎರಡು ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಸಮಿತಿಗೆ ಸೂಚಿಸಲಾಗಿದೆ.
ಆರು ತಿಂಗಳ ಒಳಗಿನ ಕೋರ್ಸ್‌ಗೆ ರೂ. 20 ಸಾವಿರ, 6 ರಿಂದ 1 ವರ್ಷದೊಳಗಿನ ಕೋರ್ಸ್‌ಗೆ ರೂ. 40 ಸಾವಿರ, 1 ವರ್ಷದ ಕೋರ್ಸ್‌ಗೆ ರೂ. 60 ಸಾವಿರ ಹಾಗೂ ಒಂದು ವರ್ಷ ಅವಧಿ ಮೀರಿದ ಕೋರ್ಸ್‌ಗೆ ರೂ. 1 ಲಕ್ಷ ಸಾಲ ನಿಗದಿಪಡಿಸಲಾಗಿದೆ. ರೂ. 4 ಲಕ್ಷದೊಳಗಿನ ಸಾಲಕ್ಕೆ ಶೇ 12ರಷ್ಟು ಬಡ್ಡಿ ವಿಧಿಸುತ್ತಿದ್ದು, ವ್ಯಾಸಂಗ ಅವಧಿಯ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ.
ವಿದ್ಯಾರ್ಥಿ ಅನುತ್ತೀರ್ಣನಾದರೆ, ಮಧ್ಯದಲ್ಲಿ ವ್ಯಾಸಂಗ ನಿಲ್ಲಿಸಿದರೆ, ಶಿಸ್ತು ಕ್ರಮಕೈಗೊಂಡು ವಜಾಗೊಳಿಸಿದರೆ ಬಡ್ಡಿ ಸಬ್ಸಿಡಿಗೆ ಅರ್ಹರಾಗುವುದಿಲ್ಲ. ಆದರೆ, ವೈದ್ಯಕೀಯ ಕಾರಣಕ್ಕೆ ವ್ಯಾಸಂಗ ನಿಲ್ಲಿಸಿದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದರೆ ಬಡ್ಡಿಯ ಸಹಾಯಧನ ಪಡೆಯಬಹುದು. ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯ ನೋಡಲ್ ಬ್ಯಾಂಕ್ ಆಗಿರುವ ವಿಜಯಾ ಬ್ಯಾಂಕ್ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸ ಲಾಗುತ್ತದೆ.
ಸಾಲ ಮರು ಪಾವತಿ
ಉದ್ಯೋಗ ದೊರೆತ 6 ತಿಂಗಳ ನಂತರ ಅಥವಾ ವ್ಯಾಸಂಗ ಪೂರ್ಣಗೊಂಡ 1 ವರ್ಷದ ನಂತರ ಸಾಲ ಮರು ಪಾವತಿ ಶುರುವಾಗುತ್ತದೆ. ರೂ. 50 ಸಾವಿರ ವರೆಗಿನ ಸಾಲ ಮರು ಪಾವತಿಗೆ 2 ವರ್ಷ, ರೂ. 1 ಲಕ್ಷವರೆಗಿನ ಸಾಲ ಮರು ಪಾವತಿಗೆ 5 ವರ್ಷ ಹಾಗೂ 1 ಲಕ್ಷ ಮೀರಿದ ಸಾಲಕ್ಕೆ 7 ವರ್ಷ ಕಾಲಾವಕಾಶ ನೀಡಲಾಗಿದೆ.
Courtesy: ಪ್ರಜಾವಾಣಿ, 04-02-2014