ಕಳೆದ ಒಂದು ವರ್ಷದಿಂದೀಚಿಗೆ ಉನ್ನತ ಶಿಕ್ಷಣ ಇಲಾಖೆ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವಲ್ಲಿ ಎಷ್ಟು ಆಸಕ್ತಿವಹಿಸಿದೆಯೋ ಗೊತ್ತಿಲ್ಲ ಆದರೆ ಶಿಕ್ಷಕರ ನಿದ್ದೆ ಕೆಡಿಸುವಂತಹ ತುಂಬಾ ಕೆಲಸಗಳು ಆಗಿವೆ. ಪ್ರತೀ ಬಾರಿ ಶಿಕ್ಷಕರನ್ನು ಬೆಚ್ಚಿಬೀಳಿಸುವ ಒಂದಲ್ಲ ಒಂದು ಸುತ್ತೋಲೆಗಳು ನಿರಂತರವಾಗಿ ಹೊರಡಿಸಲ್ಪಟ್ಟಿವೆ. ಮೂರು ಉದಾಹರಣೆಗಳು ಈ ಕೆಳಗಿವೆ:
೧. ದಿನಾಂಕ 16-02-2013 ರ ಕಾಲೇಜು ಶಿಕ್ಷಣ ಆಯುಕ್ತರ ಸುತ್ತೋಲೆಯ ಪ್ರಕಾರ ವಿಜ್ಞಾನ ಉಪನ್ಯಾಸಕರು ಬೋಧನೆ ಹಾಗೂ ಪ್ರಯೋಗಾಲಯ ಕಾರ್ಯವನ್ನು ಒಟ್ಟು ೨೬ ಗಂಟೆಗಳಷ್ಟು ತೆಗೆದುಕೊಳ್ಳುವಂತೆ ಸೂಚಿಸಲಾಯಿತು. ಎರಡು ಗಂಟೆಗಳ ಪ್ರಯೋಗಾಲಯವನ್ನು ಒಂದು ಗಂಟೆಯ ಬೋಧನೆಯೆಂದು ಪರಿಗಣಿಸಬೇಕೆಂದೂ ಹೇಳಲಾಯಿತು. ಇದು ಗೊಂದಲದ ವಾತಾವರಣವನ್ನು ಸ್ರಷ್ಟಿಸಿತು. ಸರಕಾರಿ ಕಾಲೇಜಿನ ಉಪನ್ಯಾಸಕರಿಗೆ ಹೊರಡಿಸಿದ ಸುತ್ತೋಲೆಯಾದರೂ ಖಾಸಗಿ ಆಡಳಿತ ಮಂಡಳಿಯವರು ಅದನ್ನು ಕೂಡಲೇ ಜಾರಿಗೆ ತರುವ ಪ್ರಯತ್ನ ಪಟ್ಟರು. ಶಿಕ್ಷಕ ಸಂಘಟನೆಗಳ ಮುಖಂಡರ ನಿರಂತರ ಪ್ರಯತ್ನದಿಂದಾಗಿ ಕೊನೆಗೂ ಹಿಂದಿನಂತೆಯೇ ೨೦ ಗಂಟೆಗಳ ಕಾರ್ಯಭಾರ ಮುಂದುವರಿಯಿತು.
2. 2013ರ ಆಗಸ್ಟ್ನಲ್ಲಿ ಕಾರ್ಯಭಾರ ಕೊರತೆ ಇರುವ ಅನುದಾನಿತ ಕಾಲೇಜುಗಳ ಉಪನ್ಯಾಸಕರುಗಳಿಗೆ ಸರಕಾರಿ ಕಾಲೇಜುಗಳಿಗೆ ನಿಯೋಜನೆ ಮಾಡುವ ಆದೇಶ. ಅನುದಾನಿತ ವಿಷಯಗಳಲ್ಲಿ ಕಾರ್ಯಭಾರದ ಕೊರತೆಯಿರುವ ಉಪನ್ಯಾಸಕರುಗಳಿಗೆ ಅನುದಾನರಹಿತ ವಿಷಯಗಳ ಕಾರ್ಯಭಾರದಿಂದ ಸರಿದೂಗಿಸಲು ಕೆಲವರ್ಷಗಳ ಹಿಂದೆ ಇದೇ ಇಲಾಖೆ ಸೂಚಿಸಿತ್ತು. ಆದರೆ ಅವುಗಳೆಲ್ಲವು ಒಂದು ವರ್ಷದ ಅವಧಿಗೆ ಹೊರಡಿಸಿದ ತಾತ್ಕಾಲಿಕ ಆದೇಶಗಳೆಂಬ ನೆಪ ನೀಡಿ ಹೊಸ ನಿಯೋಜನೆಯ ಆದೇಶಗಳನ್ನು ಹೊರಡಿಸಲಾಯಿತು. ಬೆಂಗಳೂರಿನ ಉಪನ್ಯಾಸಕರಿಗೆ ಬಾರ್ಕೂರಿಗೆ ನಿಯೋಜನೆ, ಮಂಗಳೂರಿನವರಿಗೆ ವಾರದಲ್ಲಿ ನಾಲ್ಕು ದಿನ ಚನ್ನರಾಯ ಪಟ್ಟಣದಲ್ಲಿ! ಉಪನ್ಯಾಸಕರಿಗೆ ಮಾನಸಿಕವಾಗಿ ಕೊಡಬೇಕಾದಷ್ಟು ಅಘಾತವನ್ನು ಕೊಟ್ಟು ಕೊನೆಗೆ ಅದನ್ನು ಮಾರ್ಚ್ 2014ರ ವರೆಗೆ ತಡೆಹಿಡಿಯಲಾಯಿತು, ಮತ್ತು ಈಗ ಹಿಂದಿನಂತೆಯೇ ಅನುದಾನರಹಿತ ವಿಷಯಗಳ ಕಾರ್ಯಭಾರವನ್ನು ಸರಿದೂಗಿಸುವಂತೆ ಸೂಚಿಸಲಾಯಿತು.
೩. ಇನ್ನು ಇತ್ತೀಚಿಗೆ (ದಿನಾಂಕ 04-03-2014) ಹೊರಡಿಸಿದ ಅನುದಾನ ರಹಿತ ಅವಧಿಯ ಸೇವೆಯನ್ನು ವೇತನ ಹಾಗೂ ಪಿಂಚಣಿಗೆ ಪರಿಗಣಿಸದಿರುವ ಬಗ್ಗೆ ಹೊರಡಿಸಿರುವ ಸುತ್ತೋಲೆಯು ಶಿಕ್ಷಕರಲ್ಲಿ ಆತಂಕವನ್ನು ಸ್ರಷ್ಟಿಸಿದೆ. ಮೊದಲ ದಿನದಿಂದ ಇಂದಿನವರೆಗೆ ಅನುದಾನಿತ ಅಥವಾ ಅನುದಾನರಹಿತ ಎಂಬ ಭೇದಬಾವ ಮಾಡದೆ ವಿದ್ಯಾರ್ಥಿಗಳ ಹಿತದ್ರಷ್ಟಿಯಿಂದ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡ ಶಿಕ್ಷಕನಿಗೆ ಸರಕಾರ ಕೊಡುವ ಅಪೂರ್ವ ಕೊಡುಗೆಯಿದು! ಈ ಮಾಹಿತಿಯನ್ನು ಭರ್ತಿ ಮಾಡಿಕೊಡುವವರೆಗೆ ಶಿಕ್ಷಕ ಹಾಗೂ ಶಿಕ್ಷಕೇತರ ಶಿಬಂದಿಯ ವೇತನವನ್ನು ತಡೆಹಿಡಿದಿದೆ ಆಯುಕ್ತರ ಕಛೇರಿ. ಕೆಲಸ ಮಾಡಿದವನಿಗೆ ಆತನ ವೇತನವನ್ನು ಸರಿಯಾದ ಸಮಯಕ್ಕೆ ಪಾವತಿಸುವ ಜವಾಬ್ದಾರಿ ತನಗಿದೆ ಎಂಬ ಕನಿಷ್ಟ ಜ್ಞಾನವನ್ನೂ ಮರೆತಂತಿದೆ ಈ ಇಲಾಖೆ.
ಕಳೆದ ಒಂದು ವರ್ಷದಲ್ಲಿ ಕಾಲೇಜು ಶಿಕ್ಷಕರಿಗೆ ಒಂದೆರೆಡು ತಿಂಗಳು ಹೊರತು ಪಡಿಸಿ ಎಂದೂ ತಿಂಗಳ ಮೊದಲ ವಾರದಲ್ಲಿ ವೇತನ ಪಾವತಿಯಾದದ್ದಿಲ್ಲ. ಇದೂ ಒಂದು ಇಲಾಖೆಯ ದೋರಣೆಯಾಗಿರಬಹುದೇ? ಇವೆಲ್ಲದರ ಹಿಂದೆ ಶಿಕ್ಷಕರನ್ನು ಮಾನಸಿಕವಾಗಿ ಜರ್ಜರಿತವಾಗಿಡಬೇಕೆಂಬ ಉದ್ದೇಶ ಅಡಗಿದೆಯೇ ಎಂಬ ಸಂಶಯ ಕಾಡುತ್ತದೆ. ಅಣಬೆಗಳಂತೆ ಸರ್ಕಾರಿ ಕಾಲೇಜುಗಳನ್ನು ತೆರೆದಿರುವ ಈ ಇಲಾಖೆ, ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಿಕ್ಷಕರ ಅವಶ್ಯಕತೆಯಿದೆ ಎಂಬುದನ್ನು ಮರೆತಂತಿದೆ- ಕನಿಷ್ಟ ಪಕ್ಷ ಅತಿಥಿ ಉಪನ್ಯಾಸಕರನ್ನಾದರೂ ಸಕಾಲದಲ್ಲಿ ನೇಮಿಸಬಹುದಲ್ಲವೇ?
ಈ ಹಿಂದೆ ಶಿಕ್ಷಕರ ಶೈಕ್ಷಣಿಕ ಸಮಾವೇಶಗಳಿಗೆ ಉನ್ನತ ಶಿಕ್ಷಣ ಸಚಿವರು, ಕುಲಪತಿಗಳು, ಉನ್ನತ ಶಿಕ್ಷಣ ಇಲಾಖೆಯ ಮೇಲಾದಿಕಾರಿಗಳು ಭಾಗವಹಿಸಿ ಶಿಕ್ಷಕರನ್ನು ಆಲಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಐದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆಯೋಜಿಸಿದ ಅಮುಕ್ತ್ ನ ವಾರ್ಷಿಕ ಸಮಾವೇಶದಲ್ಲಿ ಮೇಲೆ ತಿಳಿಸಿದ ಎಲ್ಲರೂ ಭಾಗವಹಿಸಿದ್ದರು. ಉನ್ನತ ಶಿಕ್ಷಣ ಇಲಾಖೆಯ ಬಗ್ಗೆ ಹಾಗೂ ಉನ್ನತ ಶಿಕ್ಷಣ ಸಚಿವರ ಬಗ್ಗೆ ಶಿಕ್ಷಕರಲ್ಲಿ ಒಂದು ಉತ್ತಮ ಭಾವನೆಯನ್ನು ಮೂಡಿಸಲು ಈ ಸಮಾವೇಶ ಸಹಕಾರಿಯಾಗಿತ್ತು. ಆದರೆ ಈಗ ಶಿಕ್ಷಕರ ಸಮಾವೇಶಗಳಲ್ಲಿ ಭಾಗವಹಿಸುವುದು ತಪ್ಪು ಎಂಬ ಬಾವನೆ ಇಲಾಖೆಗೆ ಹಾಗೂ ಮಂತ್ರಿಗಳಿಗಿದ್ದಂತಿದೆ. ಕಳೆದ ಡಿಸೆಂಬರ್ನಲ್ಲಿ ಮಂಗಳೂರಿನಲ್ಲಿ ಆಯೋಜಿಸಿದ್ದ ಐಫ಼ುಕ್ತೊ ಸಮಾವೇಶದಲ್ಲಿ ಇದು ನಮಗೆ ತಿಳಿದಿದೆ. ರಾಜ್ಯದ ಮಂತ್ರಿಗಳನ್ನು ಅಹ್ವಾನಿಸಲು ವ್ಯಯಿಸಿದಷ್ಟು ಸಮಯವನ್ನು ಸಂಯೋಜಕರು ಈ ಸಮಾವೇಶವನ್ನು ಆಯೋಜಿಸುವಲ್ಲಿ ಕಳೆಯಲಿಲ್ಲ ಎಂಬುದು ನನ್ನ ಅನಿಸಿಕೆ. ಆದರೆ ಕೊನೆಗೆ ಅತಿಥಿಗಳಾಗಿ ಬಂದದ್ದು ಕೇಂದ್ರದ ಮಂತ್ರಿಯೊಬ್ಬರು ಮಾತ್ರ, ಅದೂ ತನ್ನ ಮಾತ್ರ್ಭೂಮಿ/ಜನರ ಅಭಿಮಾನದಿಂದ!
ಈ ಎಲ್ಲಾ ಬೆಳವಣಿಗೆಗಳು ಶಿಕ್ಷಕರಲ್ಲಿ ಆತಂಕ ಹುಟ್ಟಿಸಿವೆ. ಬರೇ ಅಧಿಕಾರ, ಕಾನೂನು, ನಿಯಾಮಾವಳಿಗಳ ಚೌಕಟ್ಟಿನೊಳಗಿಂದ ಆಲೋಚಿಸುವ ಇಲಾಖೆಗೆ ಬದಲಾಗುತ್ತಿರುವ ಸನ್ನಿವೇಶದಲ್ಲಿ ಶಿಕ್ಷಕನಿಗೆ ಹೆಚ್ಚು ಮಹತ್ವನೀಡುವ ಬಗ್ಗೆ ಅಲೋಚಿಸಬೇಕಾಗಿದೆ. ಇದುವೇ ಯುಜಿಸಿಯ ಆರನೇ ವೇತನ ಆಯೋಗದ ಮುಖ್ಯನಿಲುವು. ನಿಯಮಾವಳಿಗಳು ಬೇಕು , ಬೇಡವೆಂದಲ್ಲ. ಆದರೆ ಅವುಗಳನ್ನು ಮಾನವೀಯ ದ್ರಷ್ಟಿಯಲ್ಲಿ ಜಾರಿಗೆ ತರುವುದು ಇಲಾಖೆಯ ಜಾಣತನವನ್ನು ತೋರಿಸುತ್ತದೆ. ಅದೇ ಇಂದಿನ ಅಗತ್ಯವಾಗಿದೆ.

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.